ಬೆಂಗಳೂರು:– ರಾಜ್ಯದ ಹಿತ ಕಾಯಲು ನಾನು ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜ್ಯದ ಜನರ ಹಿತ ಕಾಯಲು ನಾನು ಯಾವುದೇ ಹೋರಾಟಕ್ಕೂ ಸಿದ್ಧನಿದ್ದೇನೆ. ಕನ್ನಡಿಗರಿಗೆ ಅನ್ಯಾಯ ಆಗಿದೆ ಎಂದು ಮಾತನಾಡಿದರೆ ಅದನ್ನು ಬಿಜೆಪಿಯವರು ತಿರುಚಿ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ನಮ್ಮ ರಾಜ್ಯದ ಹಿತ ಕಾಯಲು ನಾನು ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ ಎಂದರು.
ಕನ್ನಡಿಗರಿಗೆ ಅನ್ಯಾಯ ಆಗಿದೆ ಎಂದು ನಾನು ಮಾತನಾಡಿದ್ದೆ. ಉತ್ತರ ಪ್ರದೇಶಕ್ಕೆ 33% ರಷ್ಟು ಹಣವನ್ನು ನೀಡುತ್ತಿದ್ದಾರೆ. ನಮ್ಮ ರಾಜ್ಯಕ್ಕೆ ತೆರಿಗೆಯ ಹಣವನ್ನು ವಾಪಸ್ ಕೊಡಿ ಎಂದು ಪ್ರಶ್ನೆ ಮಾಡಿದ್ದು ಹೇಗೆ ತಪ್ಪಾಗುತ್ತದೆ? ರಾಜ್ಯದಲ್ಲಿ ಬರಗಾಲ ತಾಂಡವ ಆಡುತ್ತಿದೆ. 224 ತಾಲೂಕು ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಆಗಿದೆ. ಆದರೂ ಸಹ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ನಾನು ಮಾತನಾಡಿದ್ದೇನೆ. ಅದರಲ್ಲಿ ಯಾವುದೇ ಹಿಂಪಡೆಯುವ ಪ್ರಶ್ನೆ ಇಲ್ಲ. ನಾಡಿನ ಹಿತಕ್ಕೋಸ್ಕರ ನನ್ನ ಹೋರಾಟ ಎಂದರು.
ಬಿಜೆಪಿಯವರು ಎಷ್ಟೇ ರಾಜಕಾರಣ ಮಾಡಿದರು ನನ್ನನ್ನು ನಾಯಕನನ್ನಾಗಿ ಮಾಡಲು ಅವರು ಹೊರಟಿದ್ದಾರೆ. ನನ್ನ ವಿರುದ್ಧ ಯಾವುದೇ ಠಾಣೆಯಲ್ಲಿ ಬೇಕಾದರೂ ದೂರನ್ನು ನೀಡಲಿ. ನಾನು ಹೋರಾಟ ಮಾಡಲು ಸಿದ್ಧನಿದ್ದೇನೆ. ಯಾವುದೇ ರಾಜ್ಯದ ಮುಖ್ಯಮಂತ್ರಿಯನ್ನು ಕ್ಷಣಮಾತ್ರದಲ್ಲಿ ಬದಲಾವಣೆ ಮಾಡುವ ಬಿಜೆಪಿಯವರಿಗೆ ಅಭಿವೃದ್ಧಿಯ ವಿಚಾರದಲ್ಲಿ ಸರಿಯಾದ ಹಿತಾಸಕ್ತಿ ಗೊತ್ತಾಗುವುದಿಲ್ಲವೇ ಎಂದು ಪ್ರಶ್ನಿಸಿದರು