ನವದೆಹಲಿ:- ಮಂಡ್ಯದಲ್ಲಿ ನಡೆದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿ ಕುಮಾರಸ್ವಾಮಿ ಅವರು ಕೇಸರಿ ಶಾಲು ಧರಿಸಿದಕ್ಕೆ ಸ್ವತಃ ಹೆಚ್ಡಿ ದೇವೇಗೌಡ ಖಂಡಿಸಿದ್ದಾರೆ.
ಈ ಬಗ್ಗೆ ನವದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ದೇವೇಗೌಡ, ಕುಮಾರಸ್ವಾಮಿ ಕೇಸರಿ ಶಾಲು ಹಾಕಬಾರದಿತ್ತು, ನಮ್ಮ ಪಕ್ಷದ ಶಾಲು ಹಾಕಬಹುದಿತ್ತು ಎಂದು ಹೇಳಿದ್ದಾರೆ. ಈ ಮೂಲಕ ಕುಮಾರಸ್ವಾಮಿ ಕೇಸರಿ ಶಾಲು ಹಾಕಿರುವುದನ್ನು ಪರೋಕ್ಷವಾಗಿ ಖಂಡಿಸಿದ್ದಾರೆ.
ನಾಳೆ ನರೇಂದ್ರ ಮೋದಿ ಜೊತೆಗೆ ಹೋದಾಗಲೂ ನನ್ನ ಪಕ್ಷದ ಶಾಲು ಹಾಕುತ್ತೇನೆ. ನಾನು ಖಂಡಿತವಾಗಿ ಕೇಸರಿ ಶಾಲು ಹಾಕುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿರುವ ದೇವೇಗೌಡ, ಪ್ರತಿಭಟನೆಯ ವೇಳೆ ಯಾರೋ ಬಂದು ಕೇಸರಿ ಶಾಲು ಹಾಕಿರುತ್ತಾರೆ. ಆಯಾ ಸಂದರ್ಭಕ್ಕೆ ಹಾಕಿರುತ್ತಾರೆ, ದೊಡ್ಡ ವ್ಯಾಖ್ಯಾನ ಮಾಡುವ ಅಗತ್ಯವಿಲ್ಲ ಎಂದು ಕುಮಾರಸ್ವಾಮಿ ಕೇಸರಿ ಶಾಲು ಹಾಕಿರುವುದನ್ನು ಕೊನೆಗೆ ಸಮರ್ಥಿಸಿಕೊಂಡರು.
ಇನ್ನೂ ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿ ಕುಮಾರಸ್ವಾಮಿ ಅವರು ಬಿಜೆಪಿ ಜೊತೆಗಿನ ಮೈತ್ರಿಯ ಬೆನ್ನಲ್ಲೇ ಕೇಸರಿ ಶಾಲನ್ನು ಹೆಗಲಿಗೆ ಹಾಕಿಕೊಂಡಿರುವುದು ರಾಜಕೀಯ ಪಡಸಾಲೆ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಅದರಲ್ಲೂ ರೈತ, ಪ್ರಗತಿಪರ ಹೋರಾಟದ ಹಿನ್ನೆಲೆಯನ್ನು ಹೊಂದಿರುವ ಮಂಡ್ಯದಲ್ಲೇ ಕುಮಾರಸ್ವಾಮಿ ತೊಟ್ಟಿರುವ ಕೇಸರಿ ದಿರಿಸು ಹಾಗೂ ನಡೆ ನುಡಿಗಳು ಪರ ಮತ್ತು ವಿರೋಧ ಚರ್ಚೆಗಳನ್ನು ಹುಟ್ಟುಹಾಕಿದೆ.