ರಾಯ್ಪುರ: ಚತ್ತೀಸ್ಗಢದ (Chhattisgarh) ನಕ್ಸಲ್ ಪೀಡಿತ ಜಿಲ್ಲೆಯಾದ ದಂತೇವಾಡದಲ್ಲಿ (Dantewada) ನಕ್ಸಲರು ನಿರ್ಮಾಣ ಮಾಡಿಕೊಂಡ 10 ಅಡಿ ಆಳದ ಸುಮಾರು 130 ಅಡಿ ಉದ್ದದ ಸುರಂಗ ಪತ್ತೆಯಾಗಿದೆ. ಮಾವೋವಾದಿಗಳೊಂದಿಗೆ ಗುಂಡಿನ ಚಕಮಕಿ ನಡೆಸಿ ಭದ್ರತಾ ಪಡೆಗಳು ಹಿಂತಿರುಗುತ್ತಿದ್ದಾಗ ಈ ಅಡಗುತಾಣ ಪತ್ತೆಯಾಗಿದೆ. 10 ಅಡಿ ಆಳದ ಸುರಂಗವನ್ನು ಮೊದಲು ಸ್ಥಳೀಯ ಬುಡಕಟ್ಟು ಯುವಕರನ್ನು ಒಳಗೊಂಡಿರುವ ಜಿಲ್ಲಾ ಮೀಸಲು ಗಾರ್ಡ್ ಜವಾನರು ಪತ್ತೆ ಹಚ್ಚಿದ್ದಾರೆ.
ಇದುವರೆಗೂ ಪತ್ತೆಯಾದ ನಕ್ಸಲರ ಅಡುಗು ತಾಣಗಳಲ್ಲಿ ಇದು ಭಾರೀ ದೊಡ್ಡದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಜನರ ಸಂಚಾರ ಇಲ್ಲದ ಪ್ರದೇಶದಲ್ಲಿದ್ದು, ಯಾರ ಗಮನಕ್ಕೂ ಬಂದಿರಲಿಲ್ಲ. ಜಿಲ್ಲಾ ಮೀಸಲು ಗಾರ್ಡ್ನ ನಮ್ಮ ಜವಾನರೊಬ್ಬರು ಅದನ್ನು ಪತ್ತೆಹಚ್ಚಿದ್ದಾರೆ. ಇದು ಹೊಂಚು ಹಾಕಿ ದಾಳಿ ನಡೆಸಲು ನಿರ್ಮಾಣ ಮಾಡಿರಬಹುದು ಎಂದು ಪೊಲೀಸರು (Police) ತಿಳಿಸಿದ್ದಾರೆ.
ಜಿಲ್ಲಾ ಪೊಲೀಸರು ಹಂಚಿಕೊಂಡಿರುವ ಸುರಂಗದ ವೀಡಿಯೊದಲ್ಲಿ ಸುರಂಗದ ಪ್ರವೇಶದ ಸ್ಥಳಗಳನ್ನು ಮಣ್ಣು ಮತ್ತು ಕೋಲುಗಳಿಂದ ಮುಚ್ಚಲಾಗಿದೆ. ಕಿರಿದಾದ ಸುರಂಗವು ಪ್ರತಿ ಆರು ಮೀಟರ್ ತೆರೆದುಕೊಂಡಿದೆ. ತಜ್ಞರ ಪ್ರಕಾರ ಇಂತಹ ಅಡಗುತಾಣಗಳು ಅಬುಜ್ಮದ್ ಪ್ರದೇಶದಲ್ಲಿ ಈ ಹಿಂದೆ ಕಂಡುಬಂದಿದ್ದವು. ಅವುಗಳನ್ನು ಮುಖ್ಯವಾಗಿ ಹಿರಿಯ ಮಾವೋವಾದಿ ನಾಯಕರ ಅಡಗುತಾಣಗಳಾಗಿ ಬಳಸಲಾಗುತ್ತಿತ್ತು. ಇವು ಸಹ ಹಿರಿಯ ನಕ್ಸಲ್ ಮುಖಂಡರ ಅಡುಗುತಾಣಗಳಾಗಿ ನಿರ್ಮಿಸಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.