ಬಳ್ಳಾರಿ:- ಜಿಲ್ಲೆಯಲ್ಲಿ 8 ಕ್ಯಾಂಟೀನ್ಗಳು ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ಸರ್ಕಾರದಿಂದ 3.38 ಕೋಟಿ ರೂಪಾಯಿ ಬಿಲ್ ಬಾಕಿ ಇರುವುದರಿಂದ ನಿರ್ವಹಣೆ ಸಾಧ್ಯವಾಗದೆ ಕ್ಯಾಂಟೀನ್ಗಳು ಮುಚ್ಚಿವೆ. ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಿಂದಾಗಿ ಇಂದಿರಾ ಕ್ಯಾಂಟೀನ್ಗಳು ಮುಚ್ಚುವಂತಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ
ಬಳ್ಳಾರಿ ನಗರದ ಜಿಲ್ಲಾಸ್ಪತ್ರೆ, ವಿಮ್ಸ್, ಮೋತಿ ವೃತ್ತ, ಎಪಿಎಂಸಿ ಆವರಣದ ಕ್ಯಾಂಟೀನ್ಗಳು ಮುಚ್ಚಿವೆ. ಬಳ್ಳಾರಿ ನಗರವೊಂದರಲ್ಲೇ ಸರ್ಕಾರ 3.38 ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿದೆ. 2021 ರಿಂದಲೇ ಕೋಟಿ ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ.
ಖಾಸಗಿ ಏಜೆನ್ಸಿ ಮೂಲಕ ಇಂದಿರಾ ಕ್ಯಾಂಟೀನ್ಗಳನ್ನು ನಡೆಸಲಾಗುತ್ತಿದೆ. ಇದೀಗ, ಬಿಲ್ ಬಿಡುಗಡೆಯಾಗದ ಕಾರಣ ಕ್ಯಾಂಟೀನ್ ನಡೆಸುವುದು ಕಷ್ಟ ಎಂದು ಖಾಸಗಿ ಏಜೆನ್ಸಿಗಳು ಅವುಗಳನ್ನು ಮುಚ್ಚಿವೆ. ರೇಷನ್, ತರಕಾರಿ, ಗ್ಯಾಸ್, ಸಿಬ್ಬಂದಿ ಸಂಬಳಕ್ಕೂ ಹಣ ಇಲ್ಲದೆ ಕ್ಯಾಂಟೀನ್ಗಳನ್ನು ಬಂದ್ ಮಾಡಲಾಗಿದೆ ಎಂದು ಖಾಸಗಿ ಏಜೆನ್ಸಿಗಳು ತಿಳಿಸಿವೆ.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿತ್ತು ಇಂದಿರಾ ಕ್ಯಾಂಟೀನ್. ನಂತರ ಬಿಜೆಪಿ ಸರ್ಕಾರ ಬಂದ ಬಳಿಕ ಕ್ಯಾಂಟೀನ್ ನಿರ್ವಹಣೆ ಕುಂಟುತ್ತಾ ಸಾಗಿತ್ತು. ಆದರೆ, 2023ರಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಇಂದಿರಾ ಕ್ಯಾಂಟೀನ್ಗಳಿಗೆ ಜೀವ ತುಂಬಲಿದೆ ಎಂಬ ನಿರೀಕ್ಷೆ ಜನರಲ್ಲಿತ್ತು. ಆದರೆ, ಇದೀಗ ಗ್ಯಾರಂಟಿ ಯೋಜನೆಗಳ ಸಲುವಾಗಿ ಅನುದಾನ ಬಿಡುಗಡೆ ಮಾಡದೆ ಇಂದಿರಾ ಕ್ಯಾಂಟೀನ್ಗಳು ಸೊರಗುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.