ಹುಬ್ಬಳ್ಳಿ: ತಾನು ಯಾವ ಲೋಕಸಭೆ ಕ್ಷೇತ್ರದ ಮೇಲೂ ಕಣ್ಣಿಟ್ಟಿಲ್ಲ. ಅಕಸ್ಮಾತ್ ಸ್ಪರ್ಧೆ ಮಾಡು ಅಂತ ಸೂಚಿಸಿದರೆ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸ್ಪಷ್ಟನೆ ನೀಡಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಮೂರು ನಾಲ್ಕು ತಿಂಗಳಿಂದ ನಾನು ಪ್ರವಾಸ ಮಾಡಿದಾಗ ಅನೇಕರು ಬಿಜೆಪಿಗೆ ವಾಪಸ್ ಬರಬೇಕು ಅಂತ ಸಲಹೆ ನೀಡುತ್ತಿದ್ದರು. ಎಲ್ಲಿ ಪ್ರವಾಸ ಮಾಡಿದರೂ ನಮಗೆ ಒತ್ತಡ ಬರುತ್ತಿತ್ತು. ಹಿರಿಯರಾಗಿ ಮನೆಗೆ ಬರಬೇಕು ಎಂದು ಹೇಳುತ್ತಿದ್ದರು. ಮುಂದೆ ವಿಜಯೇಂದ್ರ ಅಧ್ಯಕ್ಷರಾದ ಮೇಲೆ ನನ್ನ ಜೊತೆ ಮಾತನಾಡಿದ್ದರು ಎಂದರು.
ರಾಷ್ಟ್ರೀಯ ನಾಯಕರು ಮನಸು ಮಾಡಿದ ಮೇಲೆ ನಾನು ದೆಹಲಿಗೆ ಹೋಗಿದ್ದೆ. ಅಮಿತ್ ಶಾ, ಜೆಪಿ ನಡ್ಡಾ ಅವರನ್ನು ಭೇಟಿಯಾದಾಗ ಹಿಂದೆ ಆಗಿರೋದನ್ನ ಮರೆತು ಬಿಡಿ ಎಂದಿದ್ದರು. ನಿಮಗೆ ಗೌರವ ಕೊಡುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ನಾನು ಬಿಜೆಪಿ ಸೇರಿದ್ದೇನೆ. ಕಾರ್ಯಕಾರಿಣಿ ಸಭೆಯಲ್ಲಿ ಅನೇಕರು ಸಿಕ್ಕಿದ್ದರು. ಎಲ್ಲರೂ ಪ್ರೀತಿ ವಿಶ್ವಾಸ ತೋರಿದರು. ನಂಗೂ ಬಹಳ ಖುಷಿಯಾಯ್ತು ಎಂದರು.