ಬೆಂಗಳೂರು: ನಾವು ಗ್ಯಾರಂಟಿ (Guarantee Scheme) ಕೊಟ್ಟಿದ್ದು ಚುನಾವಣೆಗಾಗಿಯೇ. ಲೋಕಸಭೆಯಲ್ಲಿ (Lok Sabha Election) ಜನ ಮತ ಹಾಕಿಲ್ಲ ಎಂದರೆ ಗ್ಯಾರಂಟಿ ಅವಶ್ಯಕತೆ ಇಲ್ಲಾ ಎಂದರ್ಥ ಎಂದು ಮಾಗಡಿ ಶಾಸಕ ಹೆಚ್ಸಿ ಬಾಲಕೃಷ್ಣ (HC Balakrishna) ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಪಕ್ಷ ಸೋತರೆ ಗ್ಯಾರಂಟಿಗಳು ರದ್ದಾಗಬಹುದು ಎಂಬ ಬಾಲಕೃಷ್ಣ ಅವರ ಹೇಳಿಕೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗ್ಯಾರಂಟಿ ಬದಲು ಅಭಿವೃದ್ಧಿಗೆ ಹಣ ಬಳಸಲಿ ಅನ್ನೋದು ನನ್ನ ವೈಯುಕ್ತಿಕ ಅಭಿಪ್ರಾಯ. ನಾವು ಗ್ಯಾರಂಟಿ ಕೊಟ್ಟಿರೋದೇ ಚುನಾವಣೆ ಗೆಲ್ಲೋಕೆ. ಅವರು ದೇವಸ್ಥಾನ ಉದ್ಘಾಟನೆ ಮಾಡಿದ್ದು, ಮಂತ್ರಾಕ್ಷತೆ ಕೊಟ್ಟಿದ್ದು ಚುನಾವಣೆ ಗೆಲ್ಲೋಕೆ. ಬಿಜೆಪಿಯವರು (BJP) ಲೋಕಸಭೆ ಚುನಾವಣೆ ದೃಷ್ಟಿಯಿಂದ ದೇವಸ್ಥಾನ ಉದ್ಘಾಟನೆ ಮಾಡಿದರು. ನಮ್ಮ ದೀಪ ನಾವೆ ಹಚ್ಚಬೇಕು. ನಮ್ಮ ಕುಂಕುಮ ನಮಗೆ ನಾಮ ಹಾಕಿ ಅವರು ಅಧಿಕಾರಕ್ಕೆ ಬಂದರು ಎಂದು ಕಿಡಿಕಾರಿದರು.
ಪೂರ್ತಿ ಆಗದ ದೇವಸ್ಥಾನವನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡಿದ್ದು ಚುನಾವಣೆಗಾಗಿ. ಅವರು ಮಾಡಿರುವುದು ಚುನಾವಣೆಗಾಗಿ. ನಾವು ಗ್ಯಾರಂಟಿ ಕೊಟ್ಟಿದ್ದು ಚುನಾವಣೆಗಾಗಿಯೇ. ಸಿಎಂ ಡಿಸಿಎಂ ಇಬ್ಬರ ಹತ್ತಿರವೂ ಈ ವಿಚಾರ ಚರ್ಚೆ ಮಾಡಿದ್ದೇನೆ. ಅವರು ಏನೇ ಹೇಳದಿರಬಹುದು. ನನ್ನ ವೈಯುಕ್ತಿಕ ಅಭಿಪ್ರಾಯ ಲೋಕಸಭೆಯಲ್ಲಿ ಕಾಂಗ್ರೆಸ್ಗೆ ಹಿನ್ನಡೆ ಆದರೆ ಜನರಿಗೆ ಗ್ಯಾರಂಟಿ ಬೇಡವಾಗಿದೆ ಎಂದು ತೀರ್ಮಾನ ಮಾಡಬೇಕು ಎಂದರು.