ಬಹುತೇಕ ಮನೆಗಳಲ್ಲಿ ಇಂಡಿಯನ್ ಟಾಯ್ಲೆಟ್ ಬದಲಿಗೆ ವೆಸ್ಟರ್ನ್ ಟಾಯ್ಲೆಟ್ ಬಳಕೆಯೇ ಹೆಚ್ಚಾಗಿದೆ. ಹಳೆಯ ಮನೆಗಳಲ್ಲಿ ಮಾತ್ರ ಈಗ ಇಂಡಿಯನ್ ಟಾಯ್ಲೆಟ್ ಬಳಸುವವರಿದ್ದಾರೆ. ಅವರಲ್ಲೂ ಅನೇಕರು ಕಾಲು ನೋವು, ಸೊಂಟ ನೋವೆಂದು ಕಮೋಡ್ಗೆ ತಮ್ಮ ಟಾಯ್ಲೆಟ್ ರೂಂನಲ್ಲಿ ಸ್ಥಾನ ನೀಡಿದ್ದಾರೆ. ಆದರೆ, ಈ ಕಮೋಡ್ಗಳನ್ನು ನೀವು ಹೇಗೆ ಬಳಸುತ್ತೀರಾ?ಎಂಬುದು ಕೂಡ ಮುಖ್ಯವಾಗುತ್ತದೆ.
ಕಮೋಡ್ನಲ್ಲಿ ಫ್ಲಶ್ ಮಾಡುವಾಗ ಬಹುತೇಕ ಜನರು ಅದರ ಮುಚ್ಚಳವನ್ನು ತೆರೆದೇ ಇಡುತ್ತಾರೆ. ಆದರೆ, ಅಮೇರಿಕನ್ ಜರ್ನಲ್ ಆಫ್ ಇನ್ಫೆಕ್ಷನ್ ಕಂಟ್ರೋಲ್ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದಲ್ಲಿ ಅರಿಝೋನಾ ವಿಶ್ವವಿದ್ಯಾಲಯದ ಸಂಶೋಧಕರು ಟಾಯ್ಲೆಟ್ ಮುಚ್ಚಳವನ್ನು ತೆರೆದಿಡುವ ಮೂಲಕ ಫ್ಲಶ್ ಮಾಡುವುದರಿಂದ ನೀರು ಮತ್ತು ಗಾಳಿಯ ಮೂಲಕ ಸೂಕ್ಷ್ಮ ಜೀವಿಗಳು ಹರಡುತ್ತವೆ ಎಂದಿದ್ದಾರೆ.
ನಾವು ಕಮೋಡ್ ಅನ್ನು ಫ್ಲಶ್ ಮಾಡಿದಾಗ ಮುಚ್ಚಳವು ಮುಚ್ಚಿದ್ದರೂ, ಮುಚ್ಚದೇ ಇದ್ದರೂ ಸೂಕ್ಷ್ಮ ವೈರಲ್ ಕಣಗಳು ನೆಲ ಮತ್ತು ಹತ್ತಿರದ ಮೇಲ್ಮೈಗಳಿಗೆ ಹರಡುತ್ತವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಕಮೋಡ್ನ ಮುಚ್ಚಳವನ್ನು ಮುಚ್ಚುವುದರಿಂದ ಬ್ಯಾಕ್ಟೀರಿಯಾಗಳು ಹರಡುವುದನ್ನು ಕಡಿಮೆ ಮಾಡಬಹುದು ಎಂದು ಅವರು ಒತ್ತಿ ಹೇಳಿದ್ದಾರೆ.
ಓಕ್ಲಹೋಮ ವಿಶ್ವವಿದ್ಯಾನಿಲಯವು 2013ರಲ್ಲಿ ಪ್ರಕಟಿಸಿದ ಸಂಶೋಧನೆಯ ಪ್ರಕಾರ, ವಿವಿಧ ರೋಗಕಾರಕಗಳು ಮತ್ತು ನೀರಿನ ಕಣಗಳೊಂದಿಗೆ ಮಲವು ಗಾಳಿಯ ಮೂಲಕ ಮತ್ತು ಮುಚ್ಚಳವಿಲ್ಲದೆಯೇ ಶೌಚಾಲಯವನ್ನು ಫ್ಲಶ್ ಮಾಡಿದ ನಂತರ ಮೇಲ್ಮೈಗಳಲ್ಲಿ ಅಂಟಿಕೊಳ್ಳಬಹುದು ಎಂದು ಕಂಡುಬಂದಿದೆ. ಈ ಕಣಗಳು ಹೆಚ್ಚಾಗಿ ಚಲಿಸುತ್ತವೆ. ಹೀಗಾಗಿ, ಕಮೋಡ್ ಸೀಟಿನ ಮುಚ್ಚಳವನ್ನು ಮುಚ್ಚುವುದರಿಂದ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ಕಡಿಮೆ ಮಾಡಬಹುದು.
ಅಲ್ಲದೆ, ಕಮೋಡ್ ಸೀಟಿನ ಮುಚ್ಚಳವನ್ನು ಮುಚ್ಚಿ ಫ್ಲಶ್ ಮಾಡುವುದರಿಂದ ಹೆಚ್ಚು ಶಬ್ದವಾಗುವುದಿಲ್ಲ. ಇದರಿಂದ ಹೊರಗೆ ರೂಂನಲ್ಲಿ ಮಲಗಿದವರಿಗೆ ತೊಂದರೆ ಆಗುವುದಿಲ್ಲ. ಹಾಗೇ, ಇದರಿಂದ ಮಲ ವಿಸರ್ಜನೆ ಬಳಿಕ ಹೆಚ್ಚು ವಾಸನೆ ಹರಡುವುದಿಲ್ಲ. ಕಮೋಡ್ ಸೀಟಿನ ಮುಚ್ಚಳ ತೆರೆದಿಟ್ಟು ಫ್ಲಶ್ ಮಾಡುವುದರಿಂದ ಟಾಯ್ಲೆಟ್ ರೂಂನಲ್ಲಿ ವಾಸನೆ ಹರಡುತ್ತದೆ ಎಂದು ಕೂಡ ಸಂಶೋಧನೆಯಲ್ಲಿ ತಿಳಿಸಲಾಗಿದೆ.