ಈರುಳ್ಳಿಯು ಹಲವು ಪೋಷಕಾಂಶಗಳ ಗಣಿಯಾಗಿದ್ದು, ಚರ್ಮ, ಕೂದಲು, ದೇಹದ ಆರೋಗ್ಯ (Skin, Hair, Body Heath) ಹೀಗೆ ಪ್ರತಿಯೊಂದರ ಆರೋಗ್ಯ ಕಾಪಾಡುವ ಈರುಳ್ಳಿಯಲ್ಲಿ ಅಲೈಲ್ ಪ್ರೊಪೈಲ್ ಡೈಸಲ್ಫೈಡ್ ಎಂಬ ಚಂಚಲ ತೈಲವಿದ್ದು ಈರುಳ್ಳಿ ಖಾರ ಖಾರ ಎನಿಸಲು ಇದೇ ಕಾರಣ.
ಪ್ರತಿದಿನ ಹಸಿ ಈರುಳ್ಳಿ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಈರುಳ್ಳಿಯರುವ ಹೆಚ್ಚಿನ ಉತ್ಕರ್ಷಣ ನಿರೋಧಕ ಅಂಶ ಅದರಲ್ಲೂ ವಿಶೇಷವಾಗಿ ಕ್ವೆರ್ಸೆಟಿನ್ ನಿಂದಾಗಿ ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಕ್ವೆರ್ಸೆಟಿನ್ ಎಂಬ ಅಂಶವು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ಇನ್ನು ಇದರಲ್ಲಿರುವ ಅಲಿಸಿನ್ ವೈರಸ್ ಹಾಗೂ ಬ್ಯಾಕ್ಟಿರೀಯಾ ವಿರುದ್ಧ ಹೋರಾಡುವ ಗುಣಗಳನ್ನು ಹೊಂದಿದ್ದು, ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇನ್ನು ಹಸಿ ಈರುಳ್ಳಿಯಲ್ಲಿ ನಾರಿನಾಂಶ ಹೆಚ್ಚಾಗಿರುತ್ತದೆ ಮತ್ತು ಕಡಿಮೆ ಕ್ಯಾಲೋರಿಗಳನ್ನು ಒಳಗೊಂಡಿದೆ. ಇದರಿಂದ ಜೀರ್ಣಕ್ರಿಯೆಯನ್ನು ಸುಗಮವಾಗಿಸುವುದಲ್ಲದೇ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಈ ಎಲ್ಲಾ ಅನುಕೂಲಗಳ ಹೊರತಾಗಿಯೂ ಬೇರೆ ಬೇರೆ ಅನುಕೂಲಗಳು ಇವೆ.
1. ಕ್ಯಾನ್ಸರ್ ಉಂಟಾಗುವಿಕೆಯನ್ನು ತಡೆಯುತ್ತದೆ
ಹಸಿ ಈರುಳ್ಳಿಯು ಆರ್ಗನೋಸಲ್ಫರ್, ಕ್ವೆರ್ಸೆಟಿನ್, ಆಂಥೋಸಯಾನಿನ್ ಎಂಬ ಅಂಶಗಳನ್ನು ಒಳಗೊಂಡಿದ್ದು, ಇವು ಕ್ಯಾನ್ಸರ್ ವಿರೋಧಿ ಪದಾರ್ಥಗಳಾಗಿವೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಎನ್ಐಹೆಚ್) ಪ್ರಕಾರ, ಇವೆಲ್ಲವೂ ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯಲ್ಲಿ ಪ್ರಯೋಜನಕಾರಿಯಾಗಿವೆ ಎಂದು ಹೇಳಿದೆ.
2. ಸುಕ್ಕುಗಟ್ಟುವಿಕೆಯನ್ನು ತಡೆಯುತ್ತದೆ
ಈರುಳ್ಳಿಯಲ್ಲಿರುವ ಸಲ್ಫರ್ ಅಂಶವು ಪ್ರೋಟೀನ್ ನ ರಚನೆಯನ್ನು ಹೆಚ್ಚಿಸುತ್ತದೆ ಮತ್ತು ಫ್ಲೇವನಾಯ್ಡ್ ಗಳು, ಉತ್ಕರ್ಷಣ ನಿರೋಧಕ ಸಂಯುಕ್ತಗಳ ಕ್ರಿಯೆಯ ಮೂಲಕ ಚರ್ಮ, ಮುಖ ಸುಕ್ಕುಗಟ್ಟುವುದನ್ನು ತಡೆದು ಅಕಾಲಿಕ ವಯಸ್ಸಾಗುವುದನ್ನು ತಡೆಯಲು ಸಹಕಾರಿ.
3. ಫಲವತ್ತತೆಯನ್ನು ಹೆಚ್ಚಿಸುತ್ತದೆ
ನೈಸರ್ಗಿಕವಾಗಿ ನಿಮ್ಮ ಫಲವತ್ತತೆಯನ್ನು ಹೆಚ್ಚಿಸಲು ಉತ್ತಮ ಮತ್ತು ಸುಲಭವಾದ ಮಾರ್ಗವೆಂದರೆ ಪ್ರತಿದಿನ ಈರುಳ್ಳಿಯನ್ನು ತಿನ್ನುವುದು. ಈರುಳ್ಳಿಯಲ್ಲಿರುವ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ವೀರ್ಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಈರುಳ್ಳಿ ತಿನ್ನುವ ಮೂಲಕ ಲೈಂಗಿಕ ಉತ್ತೇಜನಕ್ಕೆ ಮತ್ತು ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತದೆ ಎನ್ ಐಹೆಚ್ ಹೇಳುತ್ತದೆ.
4. ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಸಹಕಾರಿ
ಈರುಳ್ಳಿಯಲ್ಲಿ ಸೆಲೆನಿಯಮ್ ಎಂಬ ಅಂಶವು ಯಥೇಚ್ಛವಾಗಿ ಕಂಡು ಬರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಅತಿಯಾದ ಪ್ರತಿಕ್ರಿಯೆಗಳನ್ನು ಕಡಿಮೆ ಮಾಡಲು ಮತ್ತು ಆಕ್ಸಿಡೀಕರಣ, ಪ್ರೋಟೀನ್ ಸಂಶ್ಲೇಷಣೆ ಮತ್ತು ಕ್ಯಾಲ್ಸಿಯಂ ವರ್ಗಾವಣೆಯಿಂದ ಪ್ರತಿರಕ್ಷಣಾ ಕೋಶಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.
5. ಮನಸ್ಥಿತಿಯನ್ನು ಉತ್ತಮವಾಗಿಸುತ್ತದೆ
ಆಧುನಿಕ ಜೀವನ ಶೈಲಿಯಿಂದಾಗಿ ಮನಸ್ಥಿತಿ ಕ್ಷಣಕ್ಕೊಮ್ಮೆ ಬದಲಾಗುತ್ತಿರುತ್ತದೆ. ಮತ್ತೆ ಇನ್ನು ಕೆಲವರು ಅಧಿಕ ಒತ್ತಡದಿಂದಾಗಿ ಖಿನ್ನತೆಗೆ ಒಳಗಾಗುವುದೂ ಉಂಟು. ಇಂತಹವರು ಈರುಳ್ಳಿ ತಿನ್ನುವುದು ಉತ್ತಮ. ಏಕೆಂದರೆ ಈರುಳ್ಳಿ ಹೋಮೋಸಿಸ್ಟೈನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಮೆದುಳಿನ ಕಾರ್ಯ ಮತ್ತು ಸಿರೊಟೋನಿನ್ ಉತ್ಪಾದನೆಯನ್ನು ದುರ್ಬಲಗೊಳಿಸುವುದರಿಂದ ಮನಸ್ಥಿತಿಯನ್ನು ಉತ್ತಮಗೊಳಿಸಲು ಮತ್ತು ಖಿನ್ನತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂಬುದು ಎನ್ಐಹೆಚ್ ನಿರ್ಣಯ.
ಆದ್ದರಿಂದ ನಿಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಈರುಳ್ಳಿ ನಿಮ್ಮಆಹಾರದ ಭಾಗವಾಗಿರಲಿ. ಇದರಿಂದ ಆರೋಗ್ಯದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಹಾಯವಾಗುತ್ತದೆ.