ದೊಡ್ಡಬಳ್ಳಾಪುರ: ರಾಜ್ಯ ತೆಂಗಿನ ನಾರು ಸಹಕಾರ ಮಹಾಮಂಡಿ ಅಧ್ಯಕ್ಷ ಹಾಗೂ ತೂಬಗೆರೆ ಹೋಬಳಿ ಜೆಡಿಎಸ್ ಮುಖಂಡ ಎಸ್.ಎಲ್.ವೆಂಕಟೇಶಬಾಬು ಅವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದು, ವರಿಷ್ಠರು ಸೂಕ್ತ ಕ್ರಮ ಜರುಗಿಸಬೇಕು ಎಂದು ತೂಬಗೆರೆ ಹೋಬಳಿ ಗಂಟಿಗಾನಹಳ್ಳಿ ಜೆಡಿಎಸ್ ಮುಖಂಡ ಸಂದೀಪ್ ಒತ್ತಾಯಿಸಿದರು. ಗಂಟಿಗಾನಹಳ್ಳಿ ಗ್ರಾಮದ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ವೆಂಕಟೇಶ್ ಬಾಬು ಅವರು ಕಾಂಗ್ರೆಸ್, ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.
ಇದರಿಂದ ಹೋಬಳಿಯಲ್ಲಿ ಜೆಡಿಎಸ್ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ. ವೆಂಕಟೇಶ್ ಬಾಬು ವಿರುದ್ದ ಕೂಡಲೇ ವರಿಷ್ಠರು ಶಿಸ್ತುಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಸ್ಥಳೀಯ ಮುಖಂಡರು ಪರ್ಯಾಯ ದಾರಿ ಕಂಡುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಗ್ರಾಮ ಪಂಚಾಯ್ತಿ, ವಿಧಾನಸಭೆ ಹಾಗೂ ಗಂಟಿಗಾನಹಳ್ಳಿ ವ್ಯವಸಾಯೋತ್ಪನ್ನ ಸೇವಾ ಸಹಕಾರ ಸಂಘದ ಚುನಾವಣೆಯಲ್ಲಿ ವೆಂಕಟೇಶಬಾಬು ಅವರು ಕಾಂಗ್ರೆಸ್ ಹಾಗೂ ಬಿಜೆಪಿ ಜೊತೆ ಸೇರಿ ಪಕ್ಷಕ್ಕೆ ಹಿನ್ನೆಡೆಯುಂಟು ಮಾಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಕುರಿತು ತಾಲೂಕು ಹಾಗೂ ಹೋಬಳಿ ಮುಖಂಡರ ಗಮನಕ್ಕೆ ತಂದರೂ ಯಾವುದೇ ಕ್ರಮ ಜರುಗಿಸಿಲ್ಲ.
ಜ.೨೭ ರಂದು ನಡೆದ ಗಂಟಿಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ೧೧ ಅಭ್ಯರ್ಥಿಗಳಲ್ಲಿ ನಾಲ್ವರು ಜಯ ಗಳಿಸಿದ್ದಾರೆ. ಉಳಿದವರು ಅತ್ಯಲ್ಪ ಮತಗಳಲ್ಲಿ ವಿರೋಚಿತ ಸೋಲು ಕಂಡಿದ್ದಾರೆ. ವೆಂಕಟೇಶಬಾಬು ಬಣದ ಏಳು ಅಭ್ಯರ್ಥಿಗಳು ಕಾಂಗ್ರೆಸ್, ಬಿಜೆಪಿ ಬೆಂಬಲದೊAದಿಗೆ ಗೆಲುವು ಸಾಧಿಸಿದ್ದಾರೆ. ಪಕ್ಷದಿಂದ ಸಾಕಷ್ಟು ಅನುಕೂಲ ಪಡೆದ ವೆಂಕಟೇಶ್ ಬಾಬು ಅವರು ಅನ್ಯಪಕ್ಷಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಜೆಡಿಎಸ್ ಪಕ್ಷಕ್ಕೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿದರು.
ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ವೆಂಕಟೇಶಬಾಬು ಅವರನ್ನು ಕೂಡಲೇ ಪಕ್ಷದಿಂದ ಕಿತ್ತೊಗೆಯಬೇಕು. ಇಲ್ಲವಾದಲ್ಲಿ ಮುಂಬರುವ ತಾ.ಪಂ, ಜಿ.ಪಂ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಪ್ರತಿಕೂಲ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದರು. ಮೆಳೇಕೋಟೆ ಭಾಗದ ಜೆಡಿಎಸ್ ಮುಖಂಡ ಗೌರೀಶ್ ಮಾತನಾಡಿ, ಕಾಂಗ್ರೆಸ್ , ಬಿಜೆಪಿ ಜೊತೆ ಹೊಂದಾಣಿಕೆ ರಾಜಕೀಯ ಮಾಡುತ್ತಿರುವ ವೆಂಕಟೇಶ್ ಬಾಬು ಅವರಿಗೆ ಪಕ್ಷ ವಿರೋಧಿ ಚಟುವಟಿಕೆ ನಿಲ್ಲಿಸುವಂಗೆ ಈಗಾಗಲೇ ಸಾಕಷ್ಟು ತಿಳಿ ಹೇಳಾಗಿತ್ತು.
ಆದರೆ, ಅವರು ತಪ್ಪು ತಿದ್ದಿಕೊಳ್ಳಲಿಲ್ಲ. ಜೆಡಿಎಸ್ ಹಿರಿಯ ಮುಖಂಡರಾದ ಎಚ್.ಅಪ್ಪಯ್ಯಣ್ಣ, ತೂಬಗೆರೆ ಹೋಬಳಿ ಅಧ್ಯಕ್ಷ ಜಗನ್ನಾಥ್ ಹಾಗೂ ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ ಅವರು ವೆಂಕಟೇಶ್ ಬಾಬು ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಸ್ಥಳೀಯ ಮುಖಂಡರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿ ಮುಂಬರುವ ಚುನಾವಣೆಗಳನ್ನು ಎದುರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಮೆಳೇಕೋಟೆ ಗ್ರಾ.ಪಂ. ಉಪಾಧ್ಯಕ್ಷರಾದ ಭಾಗ್ಯಮ್ಮ ರಮೇಶ್, ಪ್ರಕಾಶ್ ಬಾಬು, ಕೃಷ್ಣಮೂರ್ತಿ, ಮರಿಯಣ್ಣ, ಶ್ರೀನಿವಾಸ, ಅಶೋಕ್, ವಿಜಯ್ ಕುಮಾರ್,ಚಂದನ್, ಆರ್.ಮಂಜುನಾಥ, ಮಹೇಶ್, ಮಿಥುನ್,ನವೀನ್, ಹರೀಶ್ ಕುಮಾರ್, ಆನಂದಮೂರ್ತಿ ಹಾಗೂ ಕಾರ್ಯಕರ್ತರು ಹಾಜರಿದ್ದರು. ಇದೇ ವೇಳೆ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಜಯ ಗಳಿಸಿದ ಹನುಮಂತರಾಜು, ಮಹೇಶ್ ಕುಮಾರ್ ಜಿ.ಎನ್. ನಾಗರತ್ನಮ್ಮ ಹಾಗೂ ಮಾರುತಿ ಅವರನ್ನು ಪಕ್ಷದ ವತಿಯಿಂದ ಸನ್ಮಾನಿಸಲಾಯಿತು..