ಬೆಂಗಳೂರು:– ರೌಡಿಶೀಟರ್ ಮಿಲ್ಟ್ರಿ ಸತೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಅರೆಸ್ಟ್ ಮಾಡಲಾಗಿದೆ.
ಪ್ರಶಾಂತ್, ದನುಷ್, ಕಾಮ್ಲೆಟ್ ಮತ್ತು ಸುನೀಲ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು 18 ರಿಂದ 20 ವರ್ಷ ವಯಸ್ಸಿನವರಾಗಿದ್ದು, ವೈಯಕ್ತಿಕ ದ್ವೇಷದಿಂದ ಸತೀಶ್ನನ್ನು ಕೊಲೆ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಸತೀಶ್ ಕೊಲೆಯಾಗುವ ಒಂದು ದಿನದ ಮೊದಲು ಬಾರ್ನಲ್ಲಿ ರೌಡಿಶೀಟರ್ ಆರೋಪಿಯನ್ನು ನಿಂದಿಸಿದ್ದನು. ಇದರಿಂದ ಕೋಪಗೊಂಡಿದ್ದ ಆರೋಪಿಗಳು ಸತೀಶ್ ಕೊಲೆ ಮಾಡಲು ಪ್ಲಾನ್ ಮಾಡಿದ್ದರು. ಅದರಂತೆ ಬೆಂಗಳೂರಿನ ವಿವೇಕನಗರದ ಮಾಯಾಬಜಾರ್ ಸ್ಲಂನಲ್ಲಿರುವ ತಮ್ಮ ಮನೆಯ ಹೊರಗೆ ಮಲಗಿದ್ದ ಸತೀಶ್ನನ್ನು ಬುಧವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದರು.
ಬೆಂಗಳೂರು ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತ ಶೇಖರ್ ಹೆಚ್ ತೆಕ್ಕನವರ್ ಹೇಳುವ ಪ್ರಕಾರ, ಸತೀಶ್ ಒಬ್ಬ ರೌಡಿ ಶೀಟರ್ ಆಗಿದ್ದು, ಆತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಸತೀಶ್ನನ್ನು ಕೊಲೆ ಮಾಡಿದ ಆರೋಪಿಗಳು ಇತರ ಅಪರಾಧಗಳಲ್ಲಿ ಭಾಗಿಯಾಗಿದ್ದರು.
ಸತೀಶ್ ತನ್ನ ಮನೆಯಲ್ಲಿ ಕೊಲೆಯಾದ ನಂತರ ಪತ್ನಿ, ವಿವೇಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.