ದೆಹಲಿ: ಜನವರಿ 22 ಅಯೋಧ್ಯೆಯಲ್ಲಿ ಶ್ರೀರಾಮ ಪ್ರಭುವಿನ ಪ್ರಾಣ ಪ್ರತಿಷ್ಠೆ ನೆರವೇರಿದೆ. ಕೋಟ್ಯಾಂತರ ಹಿಂದೂಗಳ ಕನಸನ್ನು ಪ್ರಧಾನಿ ಮೋದಿಯವರು ನೆರವೇರಿಸಿದ್ದು, ಶ್ರೀರಾಮ ಪ್ರಭು ಅಯೋಧ್ಯಾ ಅಧಿಪತಿಯಾಗಿ ನೆಲೆ ನಿಂತಿದ್ದಾನೆ.
ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ವೇಳೆ ಗರ್ಭಗುಡಿಯಲ್ಲಿ ಐವರು ನಾಯಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶದ ರಾಜ್ಯಪಾಲರು, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ರಾಮ ಭೂಮಿ ಟ್ರಸ್ಟ್ನ ಅಧ್ಯಕ್ಷರು ಪೂಜೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಗೆ ನೈವೇದ್ಯ ಸಮರ್ಪಣೆ ಮಾಡುತ್ತಿದ್ದಾಗ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ತಮ್ಮ ವಸ್ತ್ರದಿಂದ ಮುಖವನ್ನು ಮುಚ್ಚಿಕೊಂಡಿದ್ದರು. ಇದನ್ನು ನೋಡಿದ ಅನೇಕರಿಗೆ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಏಕೆ ಹೀಗೆ ಮುಖವನ್ನು ಮುಚ್ಚಿಕೊಂಡರು ಎಂಬ ಪ್ರಶ್ನೆ ಮೂಡಿತ್ತು.
ಈ ಪ್ರಾಣ ಪ್ರತಿಷ್ಠೆ ವೇಳೆ ಗರ್ಭಗುಡಿಯೊಳಗೆ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳುಮುಖ ಮುಚ್ಚಿಕೊಂಡು ನಿಂತಿದ್ದರು. ಇದು ಎಲ್ಲರಿಗೂ ಅಚ್ಚರಿ ಉಂಟುಮಾಡಿತ್ತು. ಸದ್ಯ ಇದೀಗ ಶ್ರೀಗಳು ಇದಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು ನಮ್ಮ ಸಂಸ್ಕೃತಿ, ಆಚರಣೆ, ಪದ್ಧತಿ ಪ್ರಕಾರ ದೇವರಿಗೆ ನೈವೇದ್ಯ ನೀಡುವಾಗ, ಅರ್ಪಿಸುವಾಗ ಯಾರೂ ಕೂಡ ಅದನ್ನು ನೋಡಬಾರದು. ದೇವರು ನೈವೇದ್ಯವನ್ನು ಸ್ವೀಕರಿಸುತ್ತಾರೆ ಎಂಬುದು ನಮ್ಮ ನಂಬಿಕೆ. ಇದನ್ನು ಅರ್ಚಕರು, ಮಠಾದೀಶರು ಹಾಗೂ ದೇವರನ್ನು ಆರಾಧಿಸುವವರು ಎಲ್ಲರೂ ಆಚರಿಸುತ್ತಾರೆ. ಅಂತೆಯೇ ಶ್ರೀರಾಮನಿಗೆ ಪ್ರಧಾನಿಯವರು ನೈವೇದ್ಯ ನೀಡುವಾಗ ನಾವು ನೋಡಬಾರದೆಂದು ಆ ರೀತಿ ಮಾಡಿದೆವು ಎಂದು ಹೇಳಿದ್ದಾರೆ. ಶ್ರೀಗಳ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.