ಮೈಸೂರು : ಬಾಲರಾಮನ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಹಾಗೂ ಕುಟುಂಬಸ್ಥರು ಮೈಸೂರು ರಾಜ ವಂಶಸ್ಥ ಯದುವೀರ್ ಒಡೆಯರ್ ಅವರನ್ನು ಭೇಟಿಯಾದರು.
ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿರುವ ಬಾಲರಾಮನ ಮೂರ್ತಿ ಕೆತ್ತನೆ ಮಾಡಿರುವ ಶಿಲ್ಪಿ ಅರುಣ್ ಯೋಗಿರಾಜ್ ನಿನ್ನೆ ಬೆಂಗಳೂರಿಗೆ ಆಗಮಿಸಿದ್ದರು. ಇಂದು ಮೈಸೂರಿಗೆ ವಾಪಸ್ ಆಗಿದ್ದಾರೆ.

ಮೈಸೂರಿಗೆ ಬರುತ್ತಿದ್ದಂತೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಯೋಗಿರಾಜ್, ನಾನು ನನ್ನ ಕೆಲಸವನ್ನು ಶ್ರದ್ಧೆಯಿಂದ ಮಾಡಿದೆ. ಅದಷ್ಟೇ ನನ್ನ ಕೈಯಲ್ಲಿ ಇದ್ದಿದ್ದು. ಆದರೆ, ದೇಶದ ಜನ, ಮೈಸೂರಿನ ಜನ ಸೇರಿದಂತೆ ಎಲ್ಲರಿಂದ ತುಂಬ ಪ್ರೀತಿ ಸಿಕ್ಕಿದೆ. ನಾನು ಮೈಸೂರಿಗೆ ಬಂದ ಕೂಡಲೇ ಯದುವೀರ ಒಡೆಯರ್ ಅವರನ್ನು ಭೇಟಿ ಮಾಡಿ ಬಂದೆ. ಕಾರಣ ಏನಂದ್ರೆ, ಮಹಾರಾಜರು ನಮ್ಮ ಮನೆತನಕ್ಕೂ ಗುರುಗಳಿಗೂ ಆಶ್ರಯ ಅವಕಾಶ ಕೊಟ್ಟಿದ್ದರು. ಮಹಾರಾಜರ ಮನೆತನವನ್ನು ನೆನಪಿಸಿಕೊಳ್ಳುವುದು ಮುಖ್ಯ, ಅದಕ್ಕಾಗಿ ಹೋಗಿದ್ದೆ. ಸುತ್ತೂರು ಸ್ವಾಮೀಜಿಗಳನ್ನೂ ಭೇಟಿ ಮಾಡಲಿದ್ದೇನೆ ಎಂದು ತಿಳಿಸಿದರು.
ನಮ್ಮ ಕುಲಕಸುಬನ್ನು ಬಹಳ ಶ್ರದ್ಧೆ ಮತ್ತು ಪ್ರೀತಿಯಿಂದ ಮಾಡಬೇಕು. ಕೆಲಸಕ್ಕೆ ಮೋಸ ಮಾಡಿಕೊಳ್ಳದೆ, ದಿನಕ್ಕೆ 10 ಗಂಟೆಗಳು ಸಮಯ ಕೊಟ್ಟು ಪ್ರಯತ್ನಿಸಿ, ಹತ್ತು ವರ್ಷಗಳಲ್ಲಿ ನಿಮಗೆ ಫಲ ಸಿಗುತ್ತದೆ. ಅದಕ್ಕೆ ನಾನೇ ಉದಾಹರಣೆ ಎಂದು ಹೇಳಿದರು.