ಡ್ರೋನ್ ಪ್ರತಾಪ್ ಒಳ್ಳೆಯ ಹುಡುಗ’ ಎಂದು ಹೇಳುವ ಮೂಲಕ ಕೊನೇ ಕ್ಷಣದಲ್ಲಿ ವಿನಯ್ ಗೌಡ ಒಪ್ಪಿಕೊಂಡಿದ್ದಾರೆ.
ಡ್ರೋನ್ ಪ್ರತಾಪ್ ಮತ್ತು ವಿನಯ್ ಗೌಡ ಅವರ ನಡುವೆ ಆದ ಜಗಳಗಳು ಒಂದೆರಡಲ್ಲ. ಇಬ್ಬರೂ ಅನೇಕ ಬಾರಿ ಪರಸ್ಪರ ಆರೋಪ ಮಾಡಿಕೊಂಡಿದ್ದಾರೆ. ಆದರೆ ಈಗ ಡ್ರೋನ್ ಪ್ರತಾಪ್ ಅವರನ್ನು ವಿನಯ್ ಗೌಡ ಹೊಗಳಿದ್ದಾರೆ. ಅದಕ್ಕೆ ಕಾರಣ ಆಗಿದ್ದು ಒಂದು ಘಟನೆ. ಇನ್ನೇನು ಡ್ರೋನ್ ಪ್ರತಾಪ್ ಅವರು ಎಲಿಮಿನೇಟ್ ಆಗುತ್ತಾರೆ ಎಂಬ ಸಂದರ್ಭ ಎದುರಾಯಿತು. ಆಗ ಅವರ ಬಗ್ಗೆ ವಿನಯ್ ಗೌಡ ಅಭಿಪ್ರಾಯ ತಿಳಿಸಿದರು. ನಂತರ ಫೋಟೋಗಳು ತುಂಬಿರುವ ಬಿಗ್ ಬಾಸ್ ಮನೆಯ ನೆನಪಿನ ಗೋಡೆಯನ್ನು ನೋಡಿಕೊಂಡು ಮನದ ಮಾತುಗಳನ್ನು ಹಂಚಿಕೊಳ್ಳುವಾಗಲೂ ಡ್ರೋನ್ ಪ್ರತಾಪ್ ಬಗ್ಗೆ ತಮಗೆ ಇರುವ ಭಾವನೆ ಎಂಥದ್ದು ಎಂಬುದನ್ನು ವಿನಯ್ ಗೌಡ ತಿಳಿಸಿದರು.
ಜನವರಿ 25ರ ಸಂಚಿಕೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆಯುತ್ತದೆ ಎಂದು ಬಿಗ್ ಬಾಸ್ ಘೋಷಿಸಿದರು. ಮನೆಯಲ್ಲಿ ಇರುವ ಆರು ಮಂದಿಯ ಅಭಿಪ್ರಾಯದ ಆಧಾರದಲ್ಲಿ ಒಬ್ಬರನ್ನು ಹೊರಗೆ ಕಳಿಸಲಾಗುತ್ತದೆ ಎಂದು ಘೋಷಿಸಲಾಯಿತು. ಆಗ ಡ್ರೋನ್ ಪ್ರತಾಪ್ ಎಲಿಮಿನೇಟ್ ಆಗಬೇಕು ಎಂದು ವಿನಯ್ ಗೌಡ ತಿಳಿಸಿದರು. ‘ನನ್ನ ವೋಟ್ ಪ್ರತಾಪ್ಗೆ. ಅವನು ಒಬ್ಬ ಒಳ್ಳೆಯ ಹುಡುಗ. ಆದರೆ ಬಿಗ್ ಬಾಸ್ಗೆ ಬೇಕಾದ ಗೇಮ್ ಅವನಲ್ಲಿ ಇಲ್ಲ. ನನ್ನ ಕಣ್ಣಿಗೆ ಅವನ ಆಟ ಕಾಣಿಸಿಲ್ಲ. ಆಗಾಗ ಕಳೆದುಹೋಗುತ್ತಿದ್ದ’ ಎಂದು ವಿನಯ್ ಗೌಡ ಹೇಳಿದರು. ಆರು ವೋಟ್ಗಳಲ್ಲಿ 3 ವೋಟ್ ಪಡೆದ ಡ್ರೋನ್ ಪ್ರತಾಪ್ ಆಟ ಮುಕ್ತಾಯ ಆಯಿತು ಎಂದು ಬಿಗ್ ಬಾಸ್ ತಿಳಿಸಿದರು.
ಡ್ರೋನ್ ಪ್ರತಾಪ್ ಅವರು ಎಲ್ಲರಿಗೂ ವಿದಾಯ ಹೇಳುವ ಸಮಯ ಬಂತು. ಆಗ ಅವರನ್ನು ವಿನಯ್ ಗೌಡ ಹೊಗಳಿದರು. ‘ನಿನ್ನ ಇಷ್ಟು ದಿನಗಳ ಆಟ ಚೆನ್ನಾಗಿತ್ತು. ನೀನೊಬ್ಬ ಒಳ್ಳೆಯ ಹುಡುಗ. ಇದೊಂದು ಪ್ರಕ್ರಿಯೆ. ಯಾರಾದರೂ ಒಬ್ಬರು ಹೋಗಲೇ ಬೇಕು. ಜೀವನದಲ್ಲಿ ನೀನು ತುಂಬ ಎತ್ತರಕ್ಕೆ ಬೆಳೆಯಬೇಕು ಅಂತ ಹೇಳುತ್ತೇನೆ. ನನ್ನ ಕಡೆಯಿಂದ ಆಲ್ ದಿ ಬೆಸ್ಟ್. ಇಷ್ಟು ದಿನ ನೀನು ಆಡಿದ ಆಟಕ್ಕೆ ನನ್ನ ಚಪ್ಪಾಳೆ’ ಎಂದರು.