ಬೆಂಗಳೂರು:- ಕೋಮು ಸಾಮರಸ್ಯವನ್ನು ಕಾಪಾಡುವುದು ನಮ್ಮ ಬಲವಾದ ನಂಬಿಕೆ ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನಾವು ಬರೀ ಮಾತುಗಾರರು ಅಲ್ಲ. ಕೆಲಸ ಮಾಡಿ ತೋರಿಸುವವರು. ಚುನಾವಣೆ ಮುನ್ನ ನೀಡಿದ ಭರವಸೆಯಂತೆ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಜನರ ಹಿತಕ್ಕಾಗಿ ನಮ್ಮ ಕೆಲಸ. ಕೋಮು ಸಾಮರಸ್ಯವನ್ನು ಕಾಪಾಡುವುದು ನಮ್ಮ ಬಲವಾದ ನಂಬಿಕೆ. ಅದನ್ನು ಎಂತಹ ಕಷ್ಟ ಬಂದರೂ ಮಾಡುತ್ತೇವೆ.
ಜನ ವಿಶ್ವಾಸವನ್ನು ಕಳೆದುಕೊಳ್ಳದೇ ನಮ್ಮ ಜತೆಗೆ ಇರಬೇಕಷ್ಟೇ. ಇದು ಸಿಎಂ ಸಿದ್ದರಾಮಯ್ಯ ಅವರ ನುಡಿ ಎಂದರು. ವಚನ ಭಂಗಕ್ಕಿಂತ ದೊಡ್ಡ ದೇಶದ್ರೋಹ ಮತ್ತೊಂದಿಲ್ಲ ಎಂದು ನಾನು ಬಲವಾಗಿ ನಂಬಿದವನು. ಇದು ನಮ್ಮ ಪಕ್ಷದ ಬದ್ಧತೆ ಕೂಡಾ ಆಗಿದೆ. ಭರವಸೆಗಳನ್ನು ನೀಡಿ ಚುನಾವಣೆಯಲ್ಲಿ ಗೆದ್ದು ಬಂದಿರುವ ನಮಗೆ ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿಯೂ ಇದೆ. ಇದನ್ನು ನಾವು ಮರೆತಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಗ್ಯಾರಂಟಿ ಯೋಜನೆಗಳ ಭರವಸೆಯ ಈಡೇರಿಕೆಗೆ ಮೊದಲ ಸಚಿವ ಸಂಪುಟದಲ್ಲಿಯೇ ತಾತ್ವಿಕ ಅಂಗಿಕಾರ ಪಡೆದು ಜಾರಿ ಪ್ರಕ್ರಿಯೆಗೆ ಚಾಲನೆ ನೀಡಿದ್ದೆವು. ಇದರ ಫಲವಾಗಿ ಐದು ಗ್ಯಾರಂಟಿ ಯೋಜನೆಗಳು ಅನುಷ್ಠಾನಗೊಂಡಿವೆ ಎನ್ನುವುದನ್ನು ನಿಮ್ಮ ಮುಂದೆ ಹೇಳಲು ಹೆಮ್ಮೆ ಪಡುತ್ತೇನೆ. ದೇಶದ ಯಾವುದೇ ರಾಜ್ಯ ಸರ್ಕಾರ ಕೂಡಾ ಇಂತಹದ್ದೊಂದ ಸಾಧನೆ ಮಾಡಿಲ್ಲ ಎನ್ನುವುದನ್ನು ವಿಶ್ವಾಸಪೂರ್ವಕವಾಗಿ ಹೇಳಬಲ್ಲೆ. ಇದು ರಾಜ್ಯದ ಜನತೆ ನಮ್ಮ ಸರ್ಕಾರಕ್ಕೆ ಕೊಟ್ಟಿರುವ ಶಕ್ತಿ ಎನ್ನುವುದನ್ನು ನಾವು ಮರೆತಿಲ್ಲ ಎಂದರು ಸಿದ್ದರಾಮಯ್ಯ.
ಗ್ಯಾರಂಟಿ ಯೋಜನೆಗಳ ಜೊತೆಯಲ್ಲಿ ನಮ್ಮ ಸರ್ಕಾರದ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಕೃಷಿಭಾಗ್ಯ, ಪಶುಭಗ್ಯ,ಋಣಮುಕ್ತಭಾಗ್ಯ, ವಿದ್ಯಾಸಿರಿ, ಆರೋಗ್ಯಭಾಗ್ಯ, ಜಲಭಾಗ್ಯ ಕಾರ್ಯಕ್ರಮಗಳು ಕೂಡಾ ಯಶಸ್ವಿಯಾಗಿ ಜಾರಿಯಲ್ಲಿದೆ. ಇವೆಲ್ಲ ಯೋಜನೆಗಳು ದುಡಿಯುವ ಕೈಗಳನ್ನು ಇನ್ನಷ್ಟು ಬಲಪಡಿಸಿ ಅವುಗಳು ರಾಜ್ಯದ ಅಭಿವೃದ್ಧಿಗೆ ಬಳಕೆಯಾಗುವಂತೆ ಮಾಡುವ ಕಾರ್ಯಕ್ರಮಗಳು. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ 1.2 ಕೋಟಿ ಕುಟುಂಬಗಳಿಗೆ ವಾರ್ಷಿಕ 50 ರಿಂದ 60 ಸಾವಿರ ರೂ.ಗಳ ಆರ್ಥಿಕ ಸಹಾಯ ದೊರೆಯುತ್ತಿದೆ. ಅಧಿಕಾರಕ್ಕೆ ಬಂದ ಕೂಡಲೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಮಾಡಲು ಅನುವು ಮಾಡಿಕೊಟ್ಟ ಶಕ್ತಿ ಯೋಜನೆ ಅಭೂತಪೂರ್ವ ಜನಮನ್ನಣೆಗೆ ಪಾತ್ರವಾಗಿದೆ. 138 ಕೋಟಿ ಮಹಿಳೆಯರು ಶಕ್ತಿ ಯೋಜನೆಯ ಮೂಲಕ ಉಚಿತವಾಗಿ ಪ್ರಯಾಣಿಸಿದ್ದಾರೆ. 1.18 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ 2,000 ರೂ.ಗಳ ನೆರವು ನೀಡಲಾಗುತ್ತಿದ್ದು, ಗೃಹಜ್ಯೋತಿ ಯೋಜನೆಯಡಿ 1.51 ಕೋಟಿ ಜನರಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ ಎಂದು ಹೇಳಿದರು.