ಗುವಾಹಟಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಲೋಕಸಭೆ ಚುನಾವಣೆ ನಂತರ ಬಂಧಿಸಲಾಗುತ್ತದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಭಾರತ್ ಜೋಡೋ ನ್ಯಾಯ ಯಾತ್ರೆ ವೇಳೆ ಅಸ್ಸಾಂ ಶಾಂತಿ ಕದಡಲು ರಾಹುಲ್ ಯತ್ನಿಸಿದರು ಎಂದು ಆರೋಪಿಸಿ, ಅವರ ವಿರುದ್ಧ ಸಿಎಂ ಸೂಚನೆ ಮೇಲೆ, ಪೊಲೀಸರು ಪ್ರಕರಣ ದಾಖಲಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಹಿಮಂತ ಬಿಸ್ವಾ ಶರ್ಮಾ, ನಾವು ಎಸ್ಐಟಿ ರಚಿಸಿ ತನಿಖೆ ನಡೆಸುತ್ತೇವೆ. ರಾಹುಲ್ ಬಂಧನ ಆಗುವಂತೆ ನೋಡಿಕೊಳ್ಳುತ್ತೇವೆ. ಆದರೆ ಈಗಲ್ಲ. ಲೋಕಸಭೆ ಚುನಾವಣೆಯ ನಂತರ. ನಾವು ಈಗ ಕ್ರಮ ಕೈಗೊಂಡರೆ, ಅದು ರಾಜಕೀಯ ಪ್ರೇರಿತ ಎಂಬ ಆರೋಪ ನಮ್ಮ ಮೇಲೆ ಕೇಳಿಬರುತ್ತದೆ. ಹೀಗಾಗಿ ಈಗ ಬಂಧಿಸಲ್ಲ ಎಂದರು. ರಾಹುಲ್ ಯಾತ್ರೆಯ ಸಂಪೂರ್ಣ ಉದ್ದೇಶವು ಅಸ್ಸಾಂನ ಶಾಂತಿ ಕದಡುವುದು. ಆದರೆ ಇದಕ್ಕೆ ಅವಕಾಶ ನೀಡಲ್ಲ. ನಮ್ಮ ಬಳಿ ಸಾಕ್ಷ್ಯಗಳಿವೆ ಎಂದರು.