2024ರ ಐಪಿಎಲ್ ಟೂರ್ನಿಯ ಮಿನಿ ಹರಾಜಿನಲ್ಲಿ ಸ್ಥಳೀಯ ತಂಡವಾದ ಆರ್ ಸಿಬಿ ಸೇರಿದಂತೆ ಯಾವುದೇ ಫ್ರಾಂಚೈಸಿಯ ಗಮನ ಸೆಳೆಯುವಲ್ಲಿ ಕನ್ನಡಿಗ ಕರುಣ್ ನಾಯರ್ ವಿಫಲರಾಗಿದ್ದರು. ಈಗ 2024ರ ಕೌಂಟಿ ಚಾಂಪಿಯನ್ ಶಿಪ್ ನಲ್ಲಿ ನಾರ್ತ್ಹ್ಯಾಂಪ್ಟನ್ಶೈರ್ ಪರ ಆಡಲು ಕನ್ನಡಿಗ ಸಜ್ಜಾಗಿದ್ದಾರೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿರುವ 2024ರ ಕೌಂಟಿ ಚಾಂಪಿಯನ್ ಶಿಪ್ ನಲ್ಲಿ 32 ವರ್ಷದ ಮಧ್ಯಮ ಕ್ರಮಾಂಕದ ಬ್ಯಾಟರ್ ನಾರ್ತ್ಹ್ಯಾಂಪ್ಟನ್ಶೈರ್ ಪರ ಆಡಲು ಹೊರಟಿದ್ದು, 2023ರಲ್ಲಿ ನಡೆದಿದ್ದ ಚಾಂಪಿಯನ್ ಶಿಪ್ ನಲ್ಲಿ ಇದೇ ತಂಡದ ಪರ ಆಡಿದ್ದ ಕರುಣ್ ನಾಯರ್ 3 ಇನಿಂಗ್ಸ್ ನಲ್ಲಿ 78,150 ಹಾಗೂ 21 ರನ್ ಗಳಿಸಿ ಗಮನ ಸೆಳೆದಿದ್ದರು.
“ನಾವು ಮತ್ತೊಮ್ಮೆ ಕರುಣ್ ನಾಯರ್ ಅವರ ಹೆಸರನ್ನು ತಂಡದ ಬೋರ್ಡ್ ಮೇಲೆ ಹಾಕಲು ತುಂಬಾ ಹೆಮ್ಮೆ ಪಡುತ್ತೇವೆ. ಈ ಬಾರಿಯೂ ಆತ ತಂಡದ ಬಹುಮೌಲ್ಯ ಆಟಗಾರನಾಗಿರುತ್ತಾನೆ ಎಂಬ ಭರವಸೆ ನನಗಿದೆ” ಎಂದು ಜಾನ್ ಸ್ಯಾಡ್ಲರ್ ಹೇಳಿದ್ದಾರೆ.
“ಕೌಂಟಿ ಚಾಂಪಿಯನ್ ಶಿಪ್ ನಲ್ಲಿ ಮತ್ತೊಮ್ಮೆ ನಾರ್ತ್ಹ್ಯಾಂಪ್ಟನ್ಶೈರ್ಪರ ಆಡುವ ಅವಕಾಶ ಪಡೆದಿರುವುದಕ್ಕೆ ನಾನು ಸಾಕಷ್ಟು ರೋಮಾಂಚನಗೊಂಡಿದ್ದೇನೆ. ತಂಡಕ್ಕೆ ಗೆಲುವು ತಂದುಕೊಡುವುದೇ ನನ್ನ ಗುರಿಯಾಗಿದ್ದು, ಪಾಯಿಂಟ್ಸ್ ಟೇಬಲ್ ನಲ್ಲಿ ತಂಡವನ್ನು ಮೇಲಕ್ಕೇರಿಸಲು ಸಹಕರಿಸುತ್ತೇನೆ. ಮತ್ತು ಈ ತಂಡದ ಪರ ಬ್ಯಾಟ್ ಮಾಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಡಲು ಸಾಕಷ್ಟು ಕಾತರದಿಂದ ಕಾಯುತ್ತಿದ್ದೇನೆ,” ಎಂದು ಕರುಣ್ ನಾಯರ್ ಹೇಳಿದ್ದಾರೆ.