ಲಕ್ನೋ: ತನ್ನ 5 ಜನ ಸಹೋದರರಿಗೆ ಹಣ ನೀಡಿ ಪತ್ನಿಯನ್ನೇ (Wife) ಪತಿ (Husband) ಕೊಲೆ ಮಾಡಿಸಿರುವ ಘಟನೆ ಫತೇಪುರ್ನಲ್ಲಿ (Fatehpur) ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ (Uttar Pradesh) ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ರೋಹಿತ್ ಲೋಧಿ, ರಾಮಚಂದ್ರ ಆಲಿಯಾಸ್ ಪುಟ್ಟು, ಶಿವಂ ಅಲಿಯಾಸ್ ಪಂಚಮ್, ಸೋನು ಲೋಧಿ ಎಂದು ಗುರುತಿಸಲಾಗಿದೆ. ಐದನೇ ಆರೋಪಿಯಾದ ನೊಂಕು ಲೋಧಿ ಪರಾರಿಯಾಗಿದ್ದಾನೆ. ಸಂತ್ರಸ್ತೆಯ ಗಂಡ ದುಬೈನಲ್ಲಿದ್ದಾನೆ ಎಂದು ತಿಳಿದು ಬಂದಿದೆ.
ಏನಿದು ಪ್ರಕರಣ?
ತವರು ಮನೆಗೆ ಹೋಗಿದ್ದ ಅತ್ತಿಗೆಯನ್ನು ಜಾತ್ರೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿ ಆಕೆಯನ್ನು ನಂಬಿಸಿ ಮೈದುನರು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಆಕೆಯ ಮೇಲೆ ಐದು ಜನ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ನಂತರ ಆಕೆಯ ಗುರುತನ್ನು ಮರೆಮಾಚಲು ಮುಖಕ್ಕೆ ಇಟ್ಟಿಗೆಗಳಿಂದ ಹೊಡೆದು ಹಲ್ಲೆ ಮಾಡಿದ್ದಾರೆ.
ಹಲ್ಲೆ ಮಾಡಿದ ನಂತರ ಸಂತ್ರಸ್ತೆಯ ಮೃತದೇಹವನ್ನು ಬೆತ್ತಲೆಯಾಗಿಯೇ ಫತೇಪುರ್ನಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರ ನೀರಿನ ಟ್ಯಾಂಕ್ನಲ್ಲಿ ಬಿಸಾಡಿ ಹೋಗಿದ್ದರು. ಗ್ರಾಮಸ್ಥರು ಮೃತದೇಹವನ್ನು ಕಂಡು ಈ ಕುರಿತು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸಂತ್ರಸ್ತೆಯ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಜೊತೆಗೆ ಸ್ಥಳದಲ್ಲಿ ಆರೋಪಿಗಳು ಕುಡಿದು ಬಿಸಾಡಿದ ಮದ್ಯದ ಬಾಟಲಿ ಮತ್ತು ತಿನಿಸುಗಳು ದೊರಕಿವೆ.
ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ಕೊಲೆ ಬಗ್ಗೆ ಬಾಯಿಬಿಟ್ಟಿದ್ದು, ಸಂತ್ರಸ್ತೆಯ ಪತಿಯೇ ಇದಕ್ಕೆ ಸಾಥ್ ನೀಡಿರುವುದಾಗಿ ಬೆಳಕಿಗೆ ಬಂದಿದೆ. ತವರು ಮನೆಗೆ ಹೋಗಿದ್ದ ಪತ್ನಿಯನ್ನು ಕೊಲೆ ಮಾಡಿದರೆ ಹಣ ನೀಡುವುದಾಗಿ ಸಂತ್ರಸ್ತೆಯ ಪತಿ, ಅವನ ಐದು ಮಂದಿ ಸಹೋದರಿಗೆ ಹಣದ ಆಸೆ ತೋರಿಸಿದ್ದ. ಹಣದ ಮೋಹಕ್ಕೆ ಒಳಗಾದ ಸಹೋದರರು ಅತ್ತಿಗೆಯನ್ನೇ ಕೊಲೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆಯ ಪತಿ ದುಬೈನಲ್ಲಿದ್ದಾನೆ. ಐದನೇ ಆರೋಪಿಗಾಗಿ ಹುಡುಕಾಟ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.