ಬೆಂಗಳೂರು:- ಅಕ್ರಮ ಎಂಬ ಮಾತ್ರಕ್ಕೆ ಕಟ್ಟಡಗಳನ್ನು ನೀವು ಕೆಡವಲಾಗದು ಎಂದು ಬಿಬಿಎಂಪಿಗೆ ಹೈಕೋರ್ಟ್ ಚಾಟಿ ಬೀಸಿದೆ.
ಬಿಬಿಎಂಪಿಯಿಂದ ಅನುಮತಿ ಪಡೆಯದಿದ್ದರೇ ಕೂಡಲೇ ಕಟ್ಟಡವನ್ನು ಕೆಡವಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ವ್ಯಾಖ್ಯಾನಿಸಿದೆ.
BBMP ಕಾಯಿದೆ, 2020 ರ ಸೆಕ್ಷನ್ 248(3) ಮತ್ತು 356 ರ ಅಡಿಯಲ್ಲಿ ಆದೇಶಗಳನ್ನು ರವಾನಿಸುವ ಮೊದಲು, ಮಂಜೂರಾತಿ ಇಲ್ಲದೆ ಕಟ್ಟಡ ನಿರ್ಮಾಣವಾಗಿದೆಯೇ ಅಥವಾ ಕಟ್ಟಡದ ಬೈಲಾಗಳ ಉಲ್ಲಂಘನೆಯಾಗಿದೆಯೇ ಎಂಬುದನ್ನು ಬಿಬಿಎಂಪಿ ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಿಸಿರುವ ಕಟ್ಟಡಗಳನ್ನು ನೆಲಸಮ ಮಾಡುವ ಬದಲು ಬಿಬಿಎಂಪಿ ಬೈಲಾ ಉಲ್ಲಂಘನೆಯಾಗಿದ್ದರೆ ಅದಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ದೇಶನ ನೀಡಬಹುದು. ಉಲ್ಲಂಘನೆ ಮಾಡಿರುವುದನ್ನು ಪರಿಗಣಿಸಿ ಅಂತಹ ಕಟ್ಟಡಗಳ ಸಕ್ರಮ ಮಾಡುವುದಕ್ಕೆ ಬೈಲಾದಲ್ಲಿ ಅವಕಾಶವಿದೆ. ಉಲ್ಲಂಘನೆ ಮಾಡಿದ ದಿನದಿಂದ ತೆರಿಗೆ ಮತ್ತು ದಂಡ ಪಾವತಿಸುವಂತೆ ಸೂಚನೆ ನೀಡಬಹುದು ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.
ಬಿಬಿಎಂಪಿ ಅಧಿಕಾರಿಗಳು ನೀಡಿದ್ದ ಕೆಡವಲು ನೋಟಿಸ್ ಪ್ರಶ್ನಿಸಿ ಎಂ.ಚಂದ್ರಕುಮಾರ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ ವಿಚಾರಣೆ ನಡೆಸಿತು. ಅರ್ಜಿ ಸಲ್ಲಿಸಿ ಯೋಜನೆ ಮಂಜೂರಾತಿ ಪಡೆಯದೇ ನಿರ್ಮಾಣ ಮಾಡಲಾಗಿದೆ ಎಂಬುದು ಅರ್ಜಿದಾರರ ವಿರುದ್ಧ ಬಿಬಿಎಂಪಿ ಆರೋಪವಾಗಿತ್ತು. ಆದ್ದರಿಂದ, ಇದು ಕಾನೂನುಬಾಹಿರ ಮತ್ತು ಕಟ್ಟಡ ಕೆಡುಗುವ ಅಗತ್ಯವಿದೆ ಎಂದು ಬಿಬಿಎಂಪಿ ವಾದಿಸಿತ್ತು.