ಟೀಮ್ ಇಂಡಿಯಾ ಬೌಲರ್ ಗಳನ್ನು ನಾಯಕ ರೋಹಿತ್ ಶರ್ಮಾ ಬಲು ಜಾಣ್ಮೆಯಿಂದ ನಿಭಾಯಿಸಬೇಕೆಂದು ದಿಗ್ಗಜ ಸುನೀಲ್ ಗವಾಸ್ಕರ್ ಸಲಹೆ ನೀಡಿದ್ದಾರೆ. ಜನವರಿ 25 ರಿಂದ ಇಂಗ್ಲೆಂಡ್ ಹಾಗೂ ಭಾರತ ತಂಡದ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ
ಟೀಮ್ ಇಂಡಿಯಾದಲ್ಲಿ ಸ್ಪಿನ್ನರ್ ಗಳ ರೂಪದಲ್ಲಿ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಹಾಗೂ ಅಕ್ಷರ್ ಪಟೇಲ್ ಇದ್ದು, ಅವರನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
“ನಾಯಕನ ಸ್ಥಾನದಲ್ಲಿರುವ ರೋಹಿತ್ ಶರ್ಮಾ ಬೌಲರ್ ಗಳನ್ನು ತುಂಬಾ ಜಾಣ್ಮೆಯಿಂದ ನಿಭಾಯಿಸಬೇಕು.ಅದರಲ್ಲೂ ಮುಖ್ಯವಾಗಿ ಹೈದರಾಬಾದ್ ಟೆಸ್ಟ್ ಪಂದ್ಯದಲ್ಲಿ. ಪಿಚ್ ಸಾಕಷ್ಟು ತಿರುವು ಪಡೆಯದ ಕಾರಣ, ಇಂಗ್ಲೆಂಡ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರೆ ಭೋಜನ ವಿರಾಮದವರೆಗೂ ಉತ್ತಮ ಪ್ರದರ್ಶನ ತೋರಿಸುತ್ತಾರೆ. ಆದ್ದರಿಂದ ಬೌಲರ್ ಗಳನ್ನು ರೋಹಿತ್ ಶರ್ಮಾ ಯಾವ ರೀತಿ ಬಳಸಿಕೊಳ್ಳುತ್ತಾರೆ ಎಂಬುದನ್ನು ನೋಡಬೇಕು,” ಎಂದು ಖ್ಯಾತ ಕ್ರಿಕೆಟ್ ವಿವರಣೆಕಾರ ಹೇಳಿದ್ದಾರೆ.
“ಹಿಂದಿನ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅತ್ಯಮೋಘ ಶತಕ ಬಾರಿಸಿದ್ದರು. ಸ್ಪಿನ್ ಸ್ನೇಹಿ ಪಿಚ್ ನಲ್ಲಿ ಯಾವ ರೀತಿ ಬ್ಯಾಟಿಂಗ್ ನಡೆಸಬೇಕೆಂಬುದನ್ನು ಹಿಟ್ ಮ್ಯಾನ್ ತೋರಿಸಿದ್ದರು. ಪ್ರಸಕ್ತ ಟೆಸ್ಟ್ ಸರಣಿಯಲ್ಲಿ ಅದೇ ರೀತಿಯ ಪ್ರದರ್ಶನ ತೋರಿ ಉತ್ತಮ ಆರಂಭ ಒದಗಿಸಿಕೊಟ್ಟರೆ ಆಗ 3 ಮತ್ತು 4ನೇ ಕ್ರಮಾಂಕದ ಬ್ಯಾಟರ್ ಗಳ ಮೇಲಿನ ಒತ್ತಡ ಕಡಿಮೆ ಆಗುವ ಮೂಲಕ ದೊಡ್ಡ ಮೊತ್ತ ಕಲೆಹಾಕಲು ಸಹಕಾರಿ ಆಗುತ್ತದೆ,” ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.