ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಆಗಿರುವ ಜನವರಿ 22 (ಸೋಮವಾರ) ಭಾರತದ ಪಾಲಿಗೆ ಐತಿಹಾಸಿಕ ದಿನವಾಗಿದ್ದು, ರಾಮ ಮಂದಿರವು ಮುಂದಿನ ತಲೆಮಾರಿನ ಭಾರತೀಯರಿಗೆ ಸ್ಫೂರ್ತಿದಾಯಕವಾಗಲಿದೆ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಮಹೋನ್ನತ ಕಾರ್ಯಕ್ರಮದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ತಮ್ಮ ಪತ್ನಿ ಅಂಜಲಿಯೊಂದಿಗೆ ತೆರಳಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ಐತಿಹಾಸಿಕ ಸಮಾರಂಭದಲ್ಲಿ ಹಲವು ಕ್ರಿಕೆಟಿಗರು, ಸಿನಿ ತಾರೆಯರು ಹಾಗೂ ದೇಶದ ಹಲವು ಗಣ್ಯರು ಪಾಲ್ಗೊಂಡಿದ್ದರು.
ಇದೊಂದು ನನಗೆ ತುಂಬಾ ವಿಶೇಷ ಅನುಭವವಾಗಿದೆ. ನಿಜಕ್ಕೂ ಇದೊಂದು ಐತಿಹಾಸಿಕ ದಿನವಾಗಿದೆ. ಇಡೀ ಭಾರತದ ನಾಗರಿಕರ ಕನಸು ನನಸಾಗಿದೆ ಎಂದು ಹೇಳುವುದಕ್ಕೆ ನಿಜಕ್ಕೂ ಸಂತೋಷವಾಗುತ್ತಿದೆ. ಇದು ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆ ಹೆಮ್ಮೆಪಡುವ ಕ್ಷಣವಾಗಿದೆ. ಭವಿಷ್ಯದ ಭಾರತೀಯರಿಗೆ ರಾಮಮಂದಿರ ಸ್ಫೂರ್ತಿದಾಯಕವಾಗಲಿದೆ. ನಾನು ಈ ಐತಿಹಾಸಿಕ ಸಮಾರಂಭದಲ್ಲಿ ಪಾಲ್ಗೊಂಡಿರುವುದಕ್ಕೆ ತುಂಬಾ ಸಂತಸವಾಗುತ್ತಿದೆ. ಮುಂದಿನ ದಿನಗಳಲ್ಲಿ ನನ್ನ ಇಡೀ ಕುಟುಂಬವನ್ನು ಇಲ್ಲಿಗೆ ಕರೆತರುತ್ತೇನೆ,” ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ನಾನು ಭಾವುಕನಾಗಿದ್ದೇನೆ ಮತ್ತು ಸಂತಸಗೊಂಡಿದ್ದೇನೆ. ನಾನು ಸೀಮಿತಗೊಂಡಿದ್ದೇನೆ. ನಾನು ಶರಣಾಗಿದ್ದೇನೆ, ನಾನು ತೃಪ್ತಿ ಹೊಂದಿದ್ದೇನೆ. ನಾನು ಕೇವಲ ರಾಮನ ಧ್ಯಾನದಲ್ಲಿ ತಲ್ಲೀನನಾಗಿದ್ದೇನೆ. ಇದೆಲ್ಲ ಶ್ರೀರಾಮನ ಮಹಿಮೆ. ರಾಮಲಲ್ಲಾ ಬಂದಿದ್ದಾರೆ. ಇದನ್ನು ಸಾಧ್ಯವಾಗಿಸಿದ ಮತ್ತು ತ್ಯಾಗ ಮಾಡಿದ ಎಲ್ಲರಿಗೂ ಕೃತಜ್ಞತೆಗಳು,” ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.