ಡಿಸೀಸ್ ಎಕ್ಸ್ ಅನ್ನೋದು ಯಾವುದೇ ನಿರ್ದಿಷ್ಟ ರೋಗದ ಹೆಸರಲ್ಲ. ಆದರೆ, ಇದು ಸಂಭಾವ್ಯ ವೈರಸ್ ಒಂದರ ಸೋಂಕಿನ ಕುರಿತಾಗಿ ಇಟ್ಟಿರುವ ಹೆಸರು. ಕೋವಿಡ್ ಮಾದರಿಯ ಸೊಂಕು ಇದಾಗಿದ್ದು, ಹೊಸ ರೀತಿಯ ವೈರಸ್ ಇರಬಹುದು ಎಂದು ಭಾವಿಸಲಾಗಿದೆ. ವೈರಸ್, ಬ್ಯಾಕ್ಟೀರಿಯಾ ಅಥವಾ ಫಂಗಸ್.. ಯಾವುದೂ ಆಗಿರಬಹುದು. ಈ ಸೋಂಕಿಗೆ ಚಿಕಿತ್ಸೆ ಇಲ್ಲ.
ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಕೋವಿಡ್, ಎಬೋಲಾ, ಲಸ್ಸಾ ಜ್ವರ, ಮೆರ್ಸ್, ನಿಫಾ, ಝೀಕಾ ಸೇರಿದಂತೆ ಹಲವು ಹೊಸ ಬಗೆಯ ರೋಗಗಳನ್ನ ಗುರ್ತಿಸಿದೆ. ಇದೇ ಮಾದರಿಯ ಹೊಸ ರೋಗವೇ ಡಿಸೀಸ್ ಎಕ್ಸ್ ಎನ್ನಲಾಗಿದೆ. ಆರಂಭದಲ್ಲಿ ಎಲ್ಲಾ ಸೋಂಕುಗಳೂ ಹೆಚ್ಚಿನ ಜೀವ ಹಾನಿಗೆ ಕಾರಣವಾಗಿದ್ದವು. ನಂತರದ ದಿನಗಳಲ್ಲಿ ಸೋಂಕಿನ ಹಾವಳಿ ನಿಯಂತ್ರಣಕ್ಕೆ ಬಂದಿತ್ತು.
ಡಿಸೀಸ್ ಎಕ್ಸ್ ಅನ್ನೋ ಪದ ಬಳಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ 2018 ರಿಂದಲೂ ಅನುಸರಿಸುತ್ತಿದೆ. ಯಾವುದೇ ಒಂದು ಹೊಸ ಸೋಂಕು ಉದ್ಭವ ಆದಾಗಲೂ ಮೊದಲಿಗೆ ಅದನ್ನು ಡಿಸೀಸ್ ಎಕ್ಸ್ ಎಂದು ಕರೆಯಾಗುತ್ತದೆ. ಬಳಿಕ ಆ ಸಾಂಕ್ರಾಮಿಕದ ತೀವ್ರತೆ ಹಾಗೂ ಗುಣ ಲಕ್ಷಣಗಳ ಆಧಾರದ ಮೇಲೆ ಹೆಸರನ್ನು ಇಡಲಾಗುತ್ತದೆ.
ನವೆಂಬರ್ 2022ರಲ್ಲಿ ಡಿಸೀಸ್ ಎಕ್ಸ್ ಕುರಿತಾಗಿ ವಿಶ್ವ ಆರೋಗ್ಯ ಸಂಸ್ಥೆ ಮೊದಲ ಬಾರಿ ಗಮನ ಸೆಳೆದಿತ್ತು. ಇದೊಂದು ಅಂತಾರಾಷ್ಟ್ರೀಯ ಮಟ್ಟದ ಸೋಂಕಾಗಿದ್ದು, ವಿಶ್ವಾದ್ಯಂತ ಹರಡುವ ಸಾಮರ್ಥ್ಯ ಇದಕ್ಕಿದೆ ಎಂದು ಹೇಳಿತ್ತು. COVID-19ಗೆ ಹೋಲಿಸಿದರೆ ಡಿಸೀಸ್ X ಎಷ್ಟು ಮಾರಕವಾಗಿದೆ? ಎಂಬುದು ತಜ್ಞರಿಗೂ ಇನ್ನೂ ತಿಳಿದಿಲ್ಲ. ಡಿಸೀಸ್ X ಸಾಮಾನ್ಯ ಶೀತಕ್ಕಿಂತ ಕಡಿಮೆ ತೀವ್ರತೆಯಿಂದ ಹಿಡಿದು ಕೊವಿಡ್-19ಗಿಂತ ಹೆಚ್ಚು ಮಾರಣಾಂತಿಕವೂ ಆಗಿರಬಹುದು.
ಡಿಸೀಸ್ ಎಕ್ಸ್ ಅನ್ನು ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ಕಷ್ಟವಾಗಬಹುದು ಎಂದು ಊಹಿಸಲಾಗಿದೆ. ಇಲ್ಲಿಯವರೆಗೆ, ಡಿಸೀಸ್ ಎಕ್ಸ್ನ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಆದರೆ ಅದು ಅಸ್ತಿತ್ವದಲ್ಲಿಲ್ಲ ಎಂದು ಅರ್ಥವಲ್ಲ. ಅಜ್ಞಾತ ರೋಗಕಾರಕದಿಂದ ಉಂಟಾಗುವ ಭವಿಷ್ಯದ ಸಾಂಕ್ರಾಮಿಕದ ಸಂಭಾವ್ಯತೆಯು ಆತಂಕ ಪಡಲೇಬೇಕಾದ ಸಂಗತಿಯಾಗಿದೆ. ಈ ರೋಗದ ಸಾಧ್ಯತೆಗಳು ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆಯುತ್ತಿವೆ.