ರಾಜ್ಯದಲ್ಲಿ ಜನವರಿಯಲ್ಲಿ ಬಿದ್ದ ಅಕಾಲಿಕ ಮಳೆಯಿಂದ ಹಲವು ಜಿಲ್ಲೆಗಳಲ್ಲಿ 266 ಹೆಕ್ಟೇರ್ ಪ್ರದೇಶದ ಬೆಳೆಗೆ ಹಾನಿಯಾಗಿ ಎನ್ಡಿಆರ್ಎಫ್ ನಿಯಮಾವಳಿ ಅನ್ವಯ 38 ಲಕ್ಷ ರೂ. ನಷ್ಟವಾಗಿದೆ.
ಹಾಸನದ ಅರಕಲಗೂಡು ತಾಲೂಕಿನ 152 ರೈತರಿಗೆ ಸೇರಿದ 76 ಹೆಕ್ಟೇರ್, ಚನ್ನರಾಯಪಟ್ಟಣ ತಾಲೂಕಿನಲ್ಲಿ 255 ರೈತರ 190 ಹೆಕ್ಟೇರ್ ಸೇರಿ ಒಟ್ಟು 266 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದ್ದು, ಕೇಂದ್ರದ ನ್ಯಾಷನಲ್ ಡಿಜಾಸ್ಟರ್ ಮ್ಯಾನೇಜ್ಮೆಂಟ್(ಪ್ರಕೃತಿ ವಿಕೋಪ ನಿರ್ವಹಣೆ) ನಿಯಮಾವಳಿ ಅನ್ವಯ ಬೆಳೆ ನಷ್ಟದ ಅಂದಾಜು ಮಾಡಿರುವ ಕೃಷಿ ಇಲಾಖೆ ಸರಕಾರಕ್ಕೆ ವರದಿ ಸಲ್ಲಿಸಿದೆ.
ಜಿಲ್ಲೆಯಲ್ಲಿ 2.94,940 ರೈತರಲ್ಲಿ 2,66,817 ಅರ್ಹ ರೈತರಿದ್ದು, 1,95,981 (ಶೇ.73 ರಷ್ಟು) ರೈತರ ಇ ಕೆವೈಸಿ ಪೂರ್ಣಗೊಂಡಿದೆ. ಶೇ.27ರಷ್ಟು ರೈತರು ಇ ಕೆವೈಸಿ ಮಾಡಿಸುವುದು ಬಾಕಿ ಇದ್ದು, ಯೋಜನೆಯ ಪ್ರತಿ ಫಲಾನುಭವಿ ರೈತರು ಆರ್ಥಿಕ ನೆರವು ಪಡೆಯಲು ಇ ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.
ರೈತರ ಆರ್ಥಿಕ ಬಲವರ್ಧನೆಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರಕಾರ ವಾರ್ಷಿಕ ತಲಾ ಆರು ಸಾವಿರ, ರಾಜ್ಯ ಸರಕಾರ ನಾಲ್ಕು ಸಾವಿರ ಹೀಗೆ ಒಟ್ಟು ಹತ್ತು ಸಾವಿರ ಆರ್ಥಿಕ ನೆರವು ನೀಡುವ ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಯ 2.94 ಲಕ್ಷ ರೈತರು ನೋಂದಣಿ ಮಾಡಿಕೊಂಡಿದ್ದು, ಇನ್ನು ನೋಂದಣಿ ಮಾಡಿಕೊಳ್ಳದ ರೈತರು ಸ್ವಯಂ ಘೋಷಣಾ ಪತ್ರ, ಸರ್ವೆ ನಂ. ಪಹಣಿ, ಆಧಾರ್ ಜೆರಾಕ್ಸ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಯನ್ನು ಹೋಬಳಿಯ ರೈತ ಸಂಪರ್ಕ ಕೇಂದ್ರಗಳಿಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.