ಬಿಸಿಸಿಐ ಪ್ರತಿ ವರ್ಷ ಪ್ರಶಸ್ತಿಗಳನ್ನು ನೀಡುತ್ತಿದ್ದು, ಇದರಲ್ಲಿ ವರ್ಷವಿಡೀ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಗೌರವಿಸಲಾಗುತ್ತದೆ. ಕಳೆದ ವರ್ಷ ಗಿಲ್ ಅವರ ಪ್ರದರ್ಶನವನ್ನು ಪರಿಗಣಿಸಿ, ಬಿಸಿಸಿಐ ಅವರನ್ನು ವರ್ಷದ ಅತ್ಯುತ್ತಮ ಭಾರತೀಯ ಕ್ರಿಕೆಟಿಗ ಎಂದು ಆಯ್ಕೆ ಮಾಡಿದೆ. ಬಿಸಿಸಿಐ ಮಂಗಳವಾರ ಹೈದರಾಬಾದ್ನಲ್ಲಿ ಈ ಪ್ರಶಸ್ತಿಗಳನ್ನು ನೀಡಲಿದೆ.
ಗಿಲ್ 2023 ರಲ್ಲಿ ಆರು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 28.66 ಸರಾಸರಿಯಲ್ಲಿ 1 ಶತಕ ಸೇರಿದಂತೆ 258 ರನ್ ಕಲೆಹಾಕಿದ್ದರು. ಹಾಗೆಯೇ ಗಿಲ್ 2023 ರಲ್ಲಿ 29 ಏಕದಿನ ಪಂದ್ಯಗಳನ್ನು ಆಡಿದ್ದು, 63.36 ಸರಾಸರಿಯಲ್ಲಿ 1584 ರನ್ ಗಳಿಸಿದ್ದಾರೆ.
ಈ ವರ್ಷ ಅವರ ಬ್ಯಾಟ್ನಿಂದ ಐದು ಶತಕ ಮತ್ತು ಒಂಬತ್ತು ಅರ್ಧ ಶತಕಗಳು ಸೇರಿವೆ. ಟಿ20ಯಲ್ಲಿ ಗಿಲ್ ಈ ವರ್ಷ 13 ಪಂದ್ಯಗಳನ್ನು ಆಡಿದ್ದು, 30 ರ ಸರಾಸರಿಯಲ್ಲಿ ಒಂದು ಶತಕ ಮತ್ತು ಒಂದು ಅರ್ಧ ಶತಕ ಸೇರಿದಂತೆ 304 ರನ್ ಗಳಿಸಿದ್ದಾರೆ.
ಅಲ್ಲದೆ ಶುಭ್ಮನ್ ಗಿಲ್ ಕಳೆದ 12 ತಿಂಗಳುಗಳಲ್ಲಿ ಅಂದರೆ 2023 ರಲ್ಲಿ ಏಕದಿನ ಮಾದರಿಯಲ್ಲಿ ಐದು ಶತಕ ಸಹಿತ ಅತೀ ವೇಗವಾಗಿ 2000 ರನ್ಗಳ ಮೈಲಿಗಲ್ಲನ್ನು ಸಾಧಿಸಿದ್ದರು.
ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ನಂತರ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ ನಾಲ್ಕನೇ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾಗಿದ್ದರು.