ಹುಬ್ಬಳ್ಳಿ: ಹಿಂದೂ ಮತ್ತು ಪರಂಪರೆಯ ವಿಚಾರವಾಗಿ ಕಾಂಗ್ರೆಸ್ ಯಾವತ್ತೂ ವಿರೋಧ ವ್ಯಕ್ತಪಡಿಸುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದು ವಿರೋಧಿ. ಹೀಗಾಗಿ ಐತಿಹಾಸಿಕ ದಿನದಂದು ರಜೆ ಘೋಷಣೆ ಮಾಡಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು. ನಗರದ ಗೊಲ್ಲರ ಓಣಿಯಲ್ಲಿ ಅಳವಡಿಸಿದ್ದ ಬೃಹತ್ ಪರದೆಯ ಮೇಲೆ ಅಯೋಧ್ಯೆ ಶ್ರೀರಾಮ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ವೀಕ್ಷಿಸಿ ಅವರು ಮಾತನಾಡಿದರು.
ನಮ್ಮ ಮನೆಗೆ ಶ್ರೀರಾಮ ಬಂದಿದ್ದಾನೆ ಎಂಬ ಸಂಭ್ರಮದಲ್ಲಿ ಇಡೀ ನಾಡಿನ ಜನರಿದ್ದಾರೆ. ಇದೇ ಶ್ರೀರಾಮ ಪ್ರತಿಷ್ಠಾಪನೆಗೆ ೫೦೦ ವರ್ಷಗಳ ಹೋರಾಟ ನಡೆದಿದೆ. ಈ ಇಡೀ ಹೋರಾಟವನ್ನು ಕಾಂಗ್ರೆಸ್ ತುಷ್ಠೀಕರಣದ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ. ಅಯೋಧ್ಯೆಗೆ ಹೋಗುವ ವಿಚಾರದಲ್ಲಿ ಸಿದ್ದರಾಮಯ್ಯನವರಿಗೆ ಗೊಂದಲವಿದೆ. ಮೊದಲು ಅಯೋಧ್ಯೆಗೆ ಹೋಗುವುದಿಲ್ಲ ಎಂದಿದ್ದ ಸಿದ್ದರಾಮಯ್ಯ, ಈಗ ಹೋಗುತ್ತೇನೆ ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ರಜೆಯ ವಿಚಾರವಾಗಿ ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರನ್ನು ಕೇಳಿರಬೇಕು. ಅವರು ಬೇಡವೆಂದಿರಬೇಕು. ಹೀಗಾಗಿ ರಜೆ ನೀಡಿರಲಿಕ್ಕಿಲ್ಲ. ಇದೇ ರೀತಿ ಹಿಂದೂ ವಿರೋಧಿ ನೀತಿ ಮುಂದುವರೆಸಿದರೆ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದರು. ಸಚಿವ ಕೆ.ಎಚ್.ಮುನಿಯಪ್ಪ ಅವರು ಶ್ರೀರಾಮ ನಾಮ ಜಪ ಮಾಡುತ್ತಿರುವುದು ಸಂತೋಷ. ಮುಖ್ಯಮಂತ್ರಿಯಾದಿಯಾಗಿ ಕಾಂಗ್ರೆಸ್ ಮುಖಂಡರಿಗೂ ಇದನ್ನೇ ಕಲಿಸಿಕೊಡಲು ಎಂದರು.