ಕರ್ನಾಟಕ ವಿರುದ್ಧ ನಡೆಯುತ್ತಿರುವ 2024 ನೇ ಸಾಲಿನ ರಣಜಿ ಟೂರ್ನಿಯ ಪಂದ್ಯದಲ್ಲಿ ಗೋವಾದ ಯುವ ಆಲ್ ರೌಂಡರ್ ಅರ್ಜುನ್ ತೆಂಡೂಲ್ಕರ್ 52 ರನ್ ಬಾರಿಸಿದರು. ಅಲ್ಲದೆ 9ನೇ ವಿಕೆಟ್ ಗೆ ಹೆರಾಂಬ್ ಪರಬ್ (53 ರನ್) ಜೊತೆಗೂಡಿ 93 ರನ್ ಕಲೆ ಹಾಕುವ ಮೂಲಕ ಗೋವಾ ಮೊದಲ ಇನಿಂಗ್ಸ್ ನಲ್ಲಿ 321 ರನ್ ಗಳಿಸಲು ನೆರವಾದರು.
ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅಂಗಣದಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಎರಡನೇ ದಿನದಾಟ (ಜನವರಿ 20)ದಲ್ಲಿ ತನ್ನ ಬ್ಯಾಟಿಂಗ್ ಕೌಶಲ ಪ್ರದರ್ಶಿಸಿದ ಅರ್ಜುನ್ ತೆಂಡೂಲ್ಕರ್, ಕರ್ನಾಟಕದ ಬೌಲರ್ಗಳ ವಿರುದ್ಧ ಪ್ರಾಬಲ್ಯ ಮೆರೆದು ಎದುರಿಸಿದ 112 ಎಸೆತಗಳಲ್ಲಿ 3 ಮನಮೋಹಕ ಬೌಂಡರಿ ಹಾಗೂ ಒಂದು ಭರ್ಜರಿ ಸಿಕ್ಸರ್ ಮೂಲಕ ಆಕರ್ಷಕ ಅರ್ಧಶತಕ (52 ರನ್) ಗಳಿಸಿದರು. ಆದರೆ, ಎಡಗೈ ವೇಗಿ ವೆಂಕಟೇಶ್ ಬೌಲಿಂಗ್ನಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ವಿಕೆಟ್ ಕೀಪರ್ ಶರತ್ ಕ್ಯಾಚ್ ಕೊಟ್ಟು ವಿಕೆಟ್ ಒಪ್ಪಿಸಿದರು.
ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಗೋವಾ 228 ರನ್ಗಳಿಗೆ 8 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಎರಡನೇ ದಿನದಾಟದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶನ ತೋರಿದ ಅರ್ಜುನ್ ತೆಂಡೂಲ್ಕರ್ ಹಾಗೂ ಹೆರಾಂಬ್ ಪರಬ್ (53 ರನ್, 8X4,1X6)9ನೇ ವಿಕೆಟ್ಗೆ ಉಪಯುಕ್ತ 93 ರನ್ ಜೊತೆಯಾಟವಾಡಿ ಪ್ರಥಮ ಇನಿಂಗ್ಸ್ನಲ್ಲಿ ಗೋವಾ, 110.1 ಓವರ್ಗಳಲ್ಲಿ 321 ರನ್ಗಳಿಸಲು ಬಲ ತುಂಬಿದರು. ಅರ್ಜುನ್ ಹಾಗೂ ಹೆರಾಂಬ್ ಅವರ ವಿಕೆಟ್ಗಳನ್ನು ವೆಂಕಟೇಶ್ ಪಡೆದರು. ಕರ್ನಾಟಕ ಪರ ವಿಜಯ್ ಕುಮಾರ್ ವೈಶಾಖ್, ಎಂ.ವೆಂಕಟೇಶ್ ಮತ್ತು ರೋಹಿತ್ ಕುಮಾರ್ ತಲಾ 3 ವಿಕೆಟ್ ಪಡೆದರೆ, ವಾಸುಕಿ ಕೌಶಿಕ್ ತಲಾ ವಿಕೆಟ್ ಪಡೆದರು.
2023ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಸಿಡಿಸಿದ್ದ ಅರ್ಜುನ್ ತೆಂಡೂಲ್ಕರ್, ಈ ಪ್ರದರ್ಶನದಿಂದಲೇ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುವ ಅವಕಾಶ ಪಡೆದಿದ್ದರು. 2024ರ ರಣಜಿ ಟೂರ್ನಿಯಲ್ಲೂ ಅದ್ಭುತ ಫಾರ್ಮ್ನಲ್ಲಿರುವ ಅರ್ಜುನ್ ತೆಂಡೂಲ್ಕರ್ ಚಂಡೀಗಡ ವಿರುದ್ಧ ಅರ್ಧಶತಕ (70 ರನ್) ಸಿಡಿಸಿದ್ದರು. ಈಗ ಕರ್ನಾಟಕ ವಿರುದ್ಧದ ಪಂದ್ಯದಲ್ಲೂ ಅರ್ಧಶತಕ (52 ರನ್) ಸಿಡಿಸಿರುವ ಅರ್ಜುನ್ ತೆಂಡೂಲ್ಕರ್, ಬೌಲಿಂಗ್ನಲ್ಲಿ ವೈಫಲ್ಯ ಎದುರಿಸಿದ್ದು ಕಳೆದ 3 ಪಂದ್ಯಗಳಿಂದ 3 ವಿಕೆಟ್ ಪಡೆದಿದ್ದಾರೆ.