ಟೆಸ್ಟ್ ಕ್ರಿಕೆಟ್ನ ಪರಿಣತ ಬ್ಯಾಟರ್ ಆಗಿರುವ ಚೇತೇಶ್ವರ್ ಪೂಜಾರ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಕಳಪೆ ಲಯ ಕಾರಣ ಅವರನ್ನು ಟೀಮ್ ಇಂಡಿಯಾದ ಟೆಸ್ಟ್ ತಂಡದಿಂದ ಕೈಬಿಡಲಾಗಿದೆ. ಆದರೂ ತಂಡಕ್ಕೆ ಕಮ್ಬ್ಯಾಕ್ ಮಾಡುವ ಪಣ ತೊಟ್ಟಿರುವ 36 ವರ್ಷದ ಅನುಭವಿ ಬಲಗೈ ಬ್ಯಾಟರ್ ದೇಶಿ ಕ್ರಿಕೆಟ್ ಆಡಲು ಮುಂದಾಗಿದ್ದು, 2022-24ರ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಸೌರಾಷ್ಟ್ರ ತಂಡದ ಪರ ಬ್ಯಾಟ್ ಬೀಸುತ್ತಿದ್ದಾರೆ. ಅದರಲ್ಲೂ ವಿದರ್ಭ ಎದುರು ಭಾನುವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಪೂಜಾರ ವಿಶೇಷ ದಾಖಲೆ ಒಂದನ್ನು ಬರೆದಿದ್ದಾರೆ.
ವಿದರ್ಭ ಎದುರು ಮೊದಲ ಇನಿಂಗ್ಸ್ನಲ್ಲಿ 43 ಮತ್ತು ಎರಡನೇ ಇನಿಂಗ್ಸ್ನಲ್ಲಿ 66 ರನ್ ಬಾರಿಸಿದ ಪೂಜಾರ ಇದೇ ವೇಳೆ ಪ್ರಥಮದರ್ಜೆ ಕ್ರಿಕೆಟ್ 20 ಸಾವಿರ ರನ್ಗಳ ಗಡಿ ದಾಟಿದ್ದಾರೆ. ಈ ಮೂಲಕ ದಿಗ್ಗಜರಿರುವ ದಾಖಲೆ ಪಟ್ಟಿ ಸೇರುವ ಮೂಲಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೂ ಮೊದಲು ಈ ಮೂಲುಗಲ್ಲು ಮುಟ್ಟಿದ ಸಾಧನೆ ಮೆರೆದಿದ್ದಾರೆ. ನಾಗ್ಪುರದಲ್ಲಿರುವ ವಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ವಿದರ್ಭ ಎದುರು ಸೌರಾಷ್ಟ್ರ ತಂಡ 238 ರನ್ಗಳ ಬೃಹತ್ ಗೆಲುವು ದಾಖಲಿಸಿತು.
ಟೆಸ್ಟ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದ ಅತ್ಯಂತ ಯಶಸ್ವಿ ಬ್ಯಾಟರ್ಗಳಲ್ಲಿ ಒಬ್ಬರಾದ ಚೇತೇಶ್ವರ್ ಪೂಜಾರ ಈವರೆಗೆ ಆಡಿರುವ 103 ಪಂದ್ಯಗಳಲ್ಲಿ 7195 ರನ್ಗಳನ್ನು ಬಾರಿಸಿದ್ದಾರೆ. ಅಷ್ಟೇ ಅಲ್ಲದೆ 44.36ರ ಸರಾಸರಿ ಕೂಡ ಹೊಂದಿದ್ದಾರೆ.
ಇನ್ನು ಪ್ರಥಮದರ್ಜೆ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್ಗಳ ಪಟ್ಟಿಯಲ್ಲಿ ಪೂಜಾರ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.