ರಾಯಚೂರು: ಜನವರಿ 22 ರಂದು ಗುರುರಾಘವೇಂದ್ರ ಸ್ವಾಮಿಗಳ ಸನ್ನಿಧಿ ಮಂತ್ರಾಲಯದಲ್ಲಿ 36 ಅಡಿ ಎತ್ತರದ ಏಕಶಿಲಾ ಅಭಯರಾಮನ (Abhaya Rama) ಮೂರ್ತಿ ಅನಾವರಣ ಹಿನ್ನೆಲೆ ಇಂದು ರಾಮಮೂರ್ತಿಯನ್ನು ಕಮಲ ಪೀಠದ ಮೇಲೆ ಅನುಷ್ಠಾನ ಮಾಡಲಾಯಿತು.
ಮಂತ್ರಾಲಯ (Mantralaya) ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ಕಮಲಪೀಠದಲ್ಲಿ ನವಧಾನ್ಯಗಳನ್ನು ಇರಿಸಿ ಪೂಜೆ ಮಾಡಿ ಅಭಯರಾಮ ಮೂರ್ತಿಯ ಪೂರ್ವಪ್ರತಿಷ್ಠಾಪನೆ ನೆರವೇರಿಸಿದರು. 9 ಅಡಿ ಕಮಲ ಪೀಠದ ಮೇಲೆ 36 ಅಡಿ ಎತ್ತರದ ಗ್ರೇ ಗ್ರಾನೈಟ್ ಶಿಲೆಯ ಅಭಯರಾಮ ರಾಮಮೂರ್ತಿಯನ್ನು ಇರಿಸಲಾಗಿದೆ.
ಜನವರಿ 22ರಂದು ಅಯೋಧ್ಯ (Ayodhya) ರಾಮಮಂದಿರದಲ್ಲಿ (Ram Mandir) ಬಾಲರಾಮನ ಪ್ರಾಣಪ್ರತಿಷ್ಠೆ ದಿನವೇ ಶ್ರೀಗಳು ವಿಶೇಷ ಪೂಜೆಯೊಂದಿಗೆ ಅಭಯರಾಮನ ಅನಾವರಣ ಮಾಡಲಿದ್ದಾರೆ. ಅಭಯರಾಮ ಸೇವಾ ಸಮಿತಿ ಅಡಿ ರಾಯರ ಭಕ್ತರು ಅಭಯರಾಮನ ಮಂದಿರ ನಿರ್ಮಾಣಕ್ಕೆ ಮುಂದಾಗಿದ್ದಾರೆ.