ಬೆಂಗಳೂರು:– ಜೆಡಿಎಸ್ ವಿರುದ್ಧ ತಿರುಗಿ ಬಿದ್ದಿದ್ದ ಸಿ.ಎಂ. ಇಬ್ರಾಹಿಂಗೆ ಭಾರೀ ಮುಖಭಂಗ ಆಗಿದ್ದು, ಜೆಡಿಎಸ್ ಪಕ್ಷದ ಚಿಹ್ನೆ, ಲೆಟರ್ಹೆಡ್ ಬಳಸದಂತೆ ಕೋರ್ಟ್ ಆದೇಶ ಹೊರಡಿಸಲಾಗಿದೆ.
ಜೆಡಿಎಸ್ ಚಿಹ್ನೆ, ಲೆಟರ್ಹೆಡ್ ಬಳಸದಂತೆ ಸಿ.ಎಂ. ಇಬ್ರಾಹಿಂಗೆ ನಗರದ ಸಿಟಿ ಸಿವಿಲ್ ನ್ಯಾಯಾಲಯ ನಿರ್ಬಂಧ ವಿಧಿಸಿ ಆದೇಶಿಸಿದೆ. ಜೆಡಿಎಸ್ನಿಂದ ಉಚ್ಚಾಟನೆಯಾದರೂ ಪಕ್ಷದ ಚಿಹ್ನೆ ಬಳಸುತ್ತಿದ್ದರು. ಇದಕ್ಕೆ ನಿರ್ಬಂಧ ವಿಧಿಸುವಂತೆ ಕೋರಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎ.ಪಿ.ರಂಗನಾಥ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಜೆಡಿಎಸ್ ಪಕ್ಷದ ಚಿಹ್ನೆ, ಲೆಟರ್ ಹೆಡ್ ಬಳಕೆ ಮಾಡುವಂತಿಲ್ಲ. ಜೆಡಿಎಸ್ ಕುರಿತಾಗಿ ಮಾಧ್ಯಮಗೋಷ್ಠಿ ನಡೆಸುವಂತಿಲ್ಲ. ಪದಾಧಿಕಾರಿಗಳನ್ನೂ ನೇಮಕ ಮಾಡುವಂತಿಲ್ಲ ಎಂದು ಸಿಟಿ ಸಿವಿಲ್ ಕೋರ್ಟ್ ಆದೇಶಿಸಿದೆ.
ಇನ್ನೂ ಸಿಎಂ ಇಬ್ರಾಹಿಂ ಅವರು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಯಾವಾಗ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿತೋ ಅಂದಿನಿಂದ ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದರು. ಪಕ್ಷದ ವರಿಷ್ಠರ ವಿರುದ್ಧ ಇಬ್ರಾಹಿಂ ಹೇಳಿಕೆಗಳನ್ನು, ಸಭೆಗಳನ್ನು ನಡೆಸಲು ಆರಂಭಿಸಿದ್ದರು.