ಬೆಂಗಳೂರು:- ಪಿಎಸ್ಐ ಮರುಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಸಬ್ಇನ್ಸ್ಪೆಕ್ಟರ್ ಓರ್ವರನ್ನು ಸಿಸಿಬಿ ವಶಕ್ಕೆ ಪಡೆದಿದೆ.
ಇಂಟೆಲಿಜೆನ್ಸ್ ವಿಭಾಗದ ಸಬ್ ಇನ್ಸ್ಪೆಕ್ಟರ್ ಆಗಿರುವ ಲಿಂಗಯ್ಯ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಈ ಸಂಬಂಧ ಅಭ್ಯರ್ಥಿಗಳು ಪ್ರತಿಭಟನೆಗಿಳಿದಿದ್ದಾರೆ. ಇದರ ಬೆನ್ನಲ್ಲೇ ಇದೀಗ ಸಿಸಿಬಿ ಪೊಲೀಸರು, ಇನ್ಸ್ಪೆಕ್ಟರ್ ಲಿಂಗಯ್ಯನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾಂತಕುಮಾರ್ ಪ್ರತಿಕ್ರಿಯಿಸಿದ್ದು, 1 ಲಕ್ಷ 60 ಸಾವಿರ ಅಭ್ಯರ್ಥಿಗಳು ಸಿಟಿಐ ಪರೀಕ್ಷೆ ಬರೆಯಲಿದ್ದಾರೆ. ಲಿಂಗಯ್ಯ ಎಂಬ ಪಿಎಸ್ಐ ಮಾತನಾಡಿದ ಆಡಿಯೋ ಲಭ್ಯವಾಗಿದೆ. ಪ್ರಶ್ನೆ ಪತ್ರಿಕೆ ನಾವೇ ಕೊಡುತ್ತೇವೆ, ಪೋಸ್ಟಿಂಗ್ ಕೊಡಿಸುತ್ತೇವೆ ಎಂದಿದ್ದಾರೆ. ಪಿಎಸ್ಐ ಪರೀಕ್ಷೆ ಕೂಡ ಬರೆಸುತ್ತೇವೆ ಅಂತಾ ಮಾತನಾಡಿದ್ದಾರೆ. ಕೆಪಿಎಸ್ಸಿ ಬೋರ್ಡ್ ಮುಂದೆ ವಿದ್ಯಾರ್ಥಿಗಳಿಗೆ ಪ್ರವೇಶ ಇಲ್ಲ. ಆದರೆ ಪೋಷಕರನ್ನು ಭೇಟಿಮಾಡಲು ಒಳಗಡೆ ಕರೆಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಜ.21ರಂದು ಕಮರ್ಷಿಯಲ್ ಟ್ಯಾಕ್ಸ್ ಇನ್ಸ್ಪೆಕ್ಟರ್ ಪರೀಕ್ಷೆ ಇದೆ. ಜ.23ರಂದು ನಡೆಯುವ ಪಿಎಸ್ಐ ಪರೀಕ್ಷೆಗೆ ಸಂಚು ನಡೆಸಿದ್ದಾರೆ. ಎರಡೂ ಪರೀಕ್ಷೆಗಳ ಅಕ್ರಮಕ್ಕೆ ಸಂಚು ರೂಪಿಸಿದ್ದಾರೆ. ಒಂದು ಹುದ್ದೆಗೆ 80 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡುತ್ತಿದ್ದಾರೆ. ಆಡಿಯೋದಲ್ಲಿ ಪವನ್ ಮತ್ತು ರಜತ್ ಎಂಬುವರ ಹೆಸರು ಉಲ್ಲೇಖಿಸಿದ್ದಾರೆ ಎಂದು ಹೇಳಿದ್ದಾರೆ.