ಮಠ ಖ್ಯಾತಿಯ ಗುರು ಪ್ರಸಾದ್ ಮತ್ತು ನವರಸ ನಾಯಕ ಜಗ್ಗೇಶ್ (Jaggesh) ಕಾಂಬಿನೇಷನ್ ನ ರಂಗನಾಯಕ (Ranganayaka) ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಮಾರ್ಚ್ 8 ರಂದು ಶಿವರಾತ್ರಿಗೆ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. 15 ವರ್ಷಗಳ ನಂತರ ಗುರು ಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್ ಚಿತ್ರವೊಂದು ಬಿಡುಗಡೆ ಆಗುತ್ತಿದೆ.
ನಿರ್ದೇಶಕ ಮಠದ ಗುರುಪ್ರಸಾದ್ (Guruprasad) ಸಿನಿಮಾ ಕೈಗೆತ್ತಿಕೊಂಡರೇ ಅದು ಯಾವತ್ತು ಶುರುವಾಗತ್ತೋ, ಯಾವತ್ತು ಮುಗಿಯತ್ತೋ ಅವರಿಗೇ ಗೊತ್ತಿರುವುದಿಲ್ಲ. ಆದರೆ, ಈ ಬಾರಿ ಹಾಗಾಗಿಲ್ಲ. ‘ರಂಗನಾಯಕ’ ಚಿತ್ರವನ್ನು ಅತೀ ವೇಗದಲ್ಲಿ ಚಿತ್ರೀಕರಣ ಮುಗಿಸಿ ಅಚ್ಚರಿ ಮೂಡಿಸಿದ್ದಾರೆ. ಈಗಾಗಲೇ ಇವರ ನಿರ್ದೇಶನದಲ್ಲಿ ಮೂಡಿ ಬಂದ ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್, ಎರಡನೇ ಸಲ ಅವಧಿಗೂ ಮೀರಿ ತಯಾರಾಗಿದ್ದವು. ಇವುಗಳ ನಂತರ ಸೆಟ್ಟೇರಿದ ‘ಅದೇಮಾ’ ನಾಲ್ಕು ವರ್ಷಗಳಾದರೂ ಇನ್ನೂ ಮುಗಿದಿಲ್ಲ. ಈ ನಡುವೆ ಮುಹೂರ್ತ ಕಂಡ ‘ರಂಗನಾಯಕ’ ಚಿತ್ರ ಕೂಡ ಬೇಗ ಬರುವುದು ಅನುಮಾನ ಎನ್ನಲಾಗಿತ್ತು. ಆದರೆ, ಅನುಮಾನವನ್ನು ದೂರು ಮಾಡಿದ್ದರು ಗುರು.
‘ರಂಗನಾಯಕ’ ಗುರುಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್ ನ ಮೂರನೇ ಚಿತ್ರ. ಮಠ ಮತ್ತು ಎದ್ದೇಳು ಮಂಜುನಾಥ ಚಿತ್ರಗಳು ಗೆದ್ದಿವೆ. ನಿರ್ಮಾಪಕರಿಗೂ ಹಣ ತಂದು ಕೊಟ್ಟಿವೆ. ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿವೆ. ಹೀಗಾಗಿ ಮೂರನೇ ಸಿನಿಮಾದ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಮೂಡಿದೆ.