ದರ್ಶನ್ ನಟನೆ ಕಾಟೇರ ಸಿನಿಮಾ ಮತ್ತೊಂದು ದಾಖಲೆ ಬರೆದಿದೆ. ಒಂದು ಕೋಟಿಗೂ ಅಧಿಕ ಟಿಕೆಟ್ ಮಾರಾಟವಾಗುವ ಮೂಲಕ 206 ಕೋಟಿ ರೂಪಾಯಿಯನ್ನು ಬಾಕ್ಸ್ ಆಫೀಸಿನಿಂದ (Box Office) ಕೊಳ್ಳೆ ಹೊಡೆದಿದೆ. 200 ಕೋಟಿ ರೂಪಾಯಿ ಕ್ಲಬ್ ಸೇರಿದ ಪೋಸ್ಟರ್ ಅನ್ನು ದರ್ಶನ್ ಅಭಿಮಾನಿಗಳು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.
ಈ ನಡುವೆ ಸುದೀಪ್ ಮತ್ತೊಂದು ಸಂಭ್ರಮದ ಸುದ್ದಿ ಕೊಟ್ಟಿದ್ದಾರೆ. ಕೆಲವು ದಿನಗಳಿಂದ ಕಾಟೇರ (Katera) ಸಿನಿಮಾವನ್ನು ಕಿಚ್ಚ ಸುದೀಪ್ (Sudeep) ನೋಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಜೊತೆ ಸುದೀಪ್ ಮಾತನಾಡಿ, ಅತೀ ಶೀಘ್ರದಲ್ಲೇ ಸಿನಿಮಾ ನೋಡುತ್ತೇನೆ ಎಂದು ಹೇಳಿದ್ದಾಗಿ ವರದಿ ಆಗಿತ್ತು. ಅದೀಗ ನಿಜವಾಗಿದೆ. ಸುದೀಪ್ ಕಾಟೇರ ಸಿನಿಮಾವನ್ನು ವೀಕ್ಷಿಸಿದ್ದಾರೆ. ಈ ಮಾಹಿತಿಯನ್ನು ಸ್ವತಃ ಸುದೀಪ್ ಅವರೇ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
ಈ ಹಿಂದೆ ನಡೆದ ಸೆಲೆಬ್ರಿಟಿ ಶೋಗೆ ಬರುವಂತೆ ಸುದೀಪ್ ಅವರಿಗೆ ಕಾಟೇರ ತಂಡದಿಂದ ಕರೆ ಹೋಗಿತ್ತು. ಕಿಚ್ಚ ಶೂಟಿಂಗ್ ನಲ್ಲಿ ಇರುವ ಕಾರಣದಿಂದಾಗಿ ಬರುವುದಕ್ಕೆ ಆಗಿರಲಿಲ್ಲ. ಆದರೆ ಅತೀ ಶೀಘ್ರದಲ್ಲೇ ಸಿನಿಮಾ ನೋಡುವುದಾಗಿ ಸುದೀಪ್ ಹೇಳಿದ್ದರು. ಇದೀಗ ಕೊಟ್ಟ ಮಾತಿನಂತೆ ಸಿನಿಮಾ ವೀಕ್ಷಣೆ ಮಾಡಿದ್ದಾರೆ.