ಭಾರತದ ಔದ್ಯೋಗಿಕ ಪ್ರಗತಿಗಾಗಿ ನೌಕರರು ವಾರಕ್ಕೆ 70 ಗಂಟೆ ಕಾಲ ಕೆಲಸ ಮಾಡಬೇಕು ಎಂದು ಕರೆ ನೀಡಿರುವ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ನಿಲುವಿಗೆ ನೌಕ್ರಿ ಡಾಟ್ ಕಾಮ್ ಅಧ್ಯಕ್ಷರು ಬೆಂಬಲ ಘೋಷಿಸಿದ್ದಾರೆ.
ಯಾರೂ ಕೂಡಾ ಸಂಜೆ 5 ಗಂಟೆ ಆಗುತ್ತಿದ್ದಂತೆಯೇ ಕೆಲಸ ನಿಲ್ಲಿಸಲು ಸಾಧ್ಯವಿಲ್ಲ. ಕೆಲಸ ಮುಗೀತು ಅನ್ನೋದಕ್ಕೆ ಸಾಧ್ಯವಿಲ್ಲ. ಶನಿವಾರ ಹಾಗೂ ಭಾನುವಾರ ನಾವು ಕೆಲಸ ಮಾಡೋದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ನೀವು ಕೆಲಸ ಮಾಡಲೇ ಬೇಕಾಗುತ್ತೆ. ನೀವು ನಿಮ್ಮ ಔದ್ಯೋಗಿಕ ರಂಗದಲ್ಲಿ ಯಶಸ್ವಿ ಆಗಲೇ ಬೇಕು ಎಂದಾದರೆ ನೀವು ಕೆಲಸ ಮಾಡಲೇ ಬೇಕು ಎಂದು ನೌಕ್ರಿ ಡಾಟ್ ಕಾಮ್ ಅಧ್ಯಕ್ಷ ಸಂಜೀವ್ ಬಿಕ್ಚಾನಂದಾನಿ ಹೇಳಿದ್ದಾರೆ.
ಯಾವುದೇ ಸ್ಟಾರ್ಟ್ ಅಪ್ನ ಸಂಸ್ಥಾಪಕರು ಆರಂಭದ ದಿನಗಳಲ್ಲಿ ತಮ್ಮ ಕೆಲಸ ಹಾಗೂ ವೈಯಕ್ತಿಕ ಜೀವನದ ನಡುವೆ ಸಮಯ ಹೊಂದಿಸೋದಕ್ಕೆ ಕಷ್ಟ ಪಡುತ್ತಾರೆ. ಇಂದಿನ ದಿನಗಳಲ್ಲಿ ಭಾರತದಲ್ಲಿ ಯಶಸ್ವಿಯಾದ ಯಾವುದೇ ಉದ್ಯಮಿಯನ್ನು ನೀವು ಕೇಳಿ ನೋಡಿ, ನೀವು ಎಷ್ಟು ಗಂಟೆ ಕಾಲ ಕೆಲಸ ಮಾಡುತ್ತೀರಿ ಎಂದು ಕೇಳಿ, ಅವರೆಲ್ಲರೂ ತಾವು ಸಾಕಷ್ಟು ಶ್ರಮ ವಹಿಸಿ ಕೆಲಸ ಮಾಡೋದಾಗಿ ಹೇಳುತ್ತಾರೆ. ಏಕೆಂದರೆ ಭಾರತದಂಥಾ ದೇಶದಲ್ಲಿ ಯಾವುದೇ ಒಂದು ಉದ್ಯಮ ಕಾರ್ಯ ಪ್ರಗತಿ ಹೊಂದಬೇಕೆಂದರೆ ಸಾಕಷ್ಟು ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತೆ.