ಹುಬ್ಬಳ್ಳಿ : ರಾಮಮಂದಿರ ಉದ್ಘಾಟನೆ ವಿಷಯದಲ್ಲಿ ನಾವು ರಾಜಕಾರಣ ಮಾಡುತ್ತಿಲ್ಲ. ರಾಜಕಾರಣ ಮಾಡುತ್ತಿರುವುದು ಯಾರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಎಂದು ಕಾಂಗ್ರೆಸ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
ನಾವು ಎಲ್ಲರಿಗೂ ಆಹ್ವಾನ ನೀಡಿದ್ದೇವೆ. ಅವರು ಸಹಜವಾಗಿ ಬಂದಿದ್ದರೆ ಯಾವುದೇ ಬಗೆಯ ಚರ್ಚೆನೂ ಆಗುತ್ತಿರಲಿಲ್ಲ. ಆದರೆ, ಎಲ್ಲಿ ಹೋದರೆ ಮತ ಸಿಗುತ್ತದೆ. ಎಲ್ಲಿ ಹೋದರೆ ಸಿಗಲ್ಲ ಎಂದು ಲೆಕ್ಕಾಚಾರ ಹಾಕಿ ಶ್ರೀರಾಮಮಂದಿರ ಉದ್ಘಾಟನೆಯನ್ನು ಬಹಿಷ್ಕರಿಸಿದರು. ಹೀಗಾಗಿ ಇದು ಜನಮಾನಸದಲ್ಲಿ ಚರ್ಚೆಗೆ ಕಾರಣವಾಗಿದೆ. ರಾಜಕಾರಣ ಮಾಡುತ್ತಿರುವುದು ನಾವಲ್ಲ ಅವರು ಎಂದು ಕಾಂಗ್ರೆಸ್ಸಿಗರಿಗೆ ತಿರುಗೇಟು ನೀಡಿದರು.
ನಾನು ಅಥವಾ ಯಾವುದೇ ಪ್ರಮುಖ ನಾಯಕರು ಆ ರೀತಿ ಪ್ರತಿಕ್ರಿಯೆ ನೀಡಿಲ್ಲ. ಕಾಂಗ್ರೆಸ್ನವರು ರಾಮಮಂದಿರ ಉದ್ಘಾಟನೆಗೆ ಬಂದರೆ ಸಂತೋಷ. ಆದರೆ ಬರಲಿಲ್ಲ ಅಂದರೂ ಓಕೆ ಎಂದ ಅವರು, ಕಾಂಗ್ರೆಸ್ಸಿಗರ ಟೀಕೆಗೆ ನಾವು ಪ್ರತಿಕ್ರಿಯೆ ನೀಡುತ್ತಿಲ್ಲ. ಜನರೇ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದರು.ಬಾಬ್ರಿ ಮಸೀದಿ ನಿರ್ನಾಮದಂತೆ ಭಟ್ಕಳ ಮಸೀದಿ ನಿರ್ನಾಮ ಮಾಡುವ ಬಗ್ಗೆ ಅನಂತಕುಮಾರ ಹೆಗಡೆ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.