ಸೊರಬ: ಕೆನರಾ ಸಂಸದ ಅನಂತಕುಮಾರ್ ಹೆಗಡೆ ಕೆಟ್ಟ ಹಾವು ಇದ್ದಂತೆ. ಜನರಿಂದ ಆಯ್ಕೆಯಾದ ನಂತರ ಸದನದಲ್ಲಿ ಕಾಣ ಸಿಗದವರು ಲೋಕಸಭಾ ಚುನಾವಣೆ ಹತ್ತಿರಾಗುತ್ತಿದ್ದಂತೆ, ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸದಲ್ಲಿ ನಿರತರಾಗಿ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಠಿ ನಡೆಸಿದ ಅವರು,
ಯಾರೇ ಆಗಿರಲಿ, ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸದಲ್ಲಿ ನಿರತರಾಗಿ ರಾಜಕೀಯ ಲಾಭ ಪಡೆಯುವ ಹುನ್ನಾರ ನಡೆಸಬಾರದು. ಕಳೆದ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ ಹೆಗಡೆ ಅವರನ್ನು ಜನತೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ. ಆದರೆ, ಸದನದಲ್ಲಿ ಎಲ್ಲಿಯೂ ಕಾಣದ ಅವರು ಆರಿಸಿದ ಜನತೆಯ ವಿಶ್ವಾಸಕ್ಕೆ ದ್ರೋಹ ಬಗೆದಿದ್ದಾರೆ. ಪ್ರಜಾಪ್ರಭುತ್ವದ ಅಡಿಯಲ್ಲಿ ಜನಪ್ರತಿನಿಧಿಯಾಗಿ ಆಯ್ಕೆಯಾದವರು ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುತ್ತಾರೆ.
ಮುಖ್ಯಮಂತ್ರಿ ಕುರಿತು ಏಕವಚನದಲ್ಲಿ ಮಾತನಾಡುತ್ತಾರೆ. ಇದು ನೀಚತನದ ಪರಮಾವಧಿ. ಇಂಥವರಿಗೆ ಮುಂದಿನ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸುವ ಅಗತ್ಯವಿದೆ ಎಂದರು. ನಾವ್ಯಾರೂ ರಾಮ ಭಕ್ತರಲ್ಲವೇ ಎಂದು ಪ್ರಶ್ನಿಸಿದ ಅವರು, ನಾವೂ ರಾಮ, ಕೃಷ್ಣರ ಭಕ್ತರು. ಪೂಜೆ ಮಾಡುತ್ತೇವೆ, ಕೈ ಮುಗಿದು ಆರಾಧಿಸುತ್ತೇವೆ. ಎಲ್ಲ ದೇವರು, ಧರ್ಮಗಳನ್ನು ಗೌರವಿಸುವುದು ಮನುಷ್ಯತ್ವದ ಸಂಕೇತ ಎಂದರು.