ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಫಘಾನಿಸ್ತಾನ ವಿರುದ್ಧ ನಡೆದ ಅಂತಿಮ ಪಂದ್ಯದಲ್ಲಿ ಚುಟುಕು ಸ್ವರೂಪದಲ್ಲಿ ಮೊದಲ ಬಾರಿ ಗೋಲ್ಡನ್ ಡಕ್ ಔಟ್ ಆದ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, ಗಾಡ್ ಆಫ್ ಕ್ರಿಕೆಟ್ ಖ್ಯಾತಿಯ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಅನಗತ್ಯ ದಾಖಲೆ ಹೆಗಲಿಗೇರಿಸಿಕೊಂಡಿದ್ದಾರೆ.
ಇಂಧೋರ್ ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಕಮ್ ಬ್ಯಾಕ್ ಪಂದ್ಯದಲ್ಲಿ 5 ಬೌಂಡರಿ ಸಹಿತ 16 ಎಸೆತಗಳಲ್ಲಿ 29 ರನ್ ಗಳಿಸಿ ವಿರಾಟ್ ಕೊಹ್ಲಿ ಗಮನ ಸೆಳೆದಿದ್ದರು. ತನ್ನ ಎರಡನೇ ತವರು ಅಂಗಳವಾದ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 6 ರನ್ ಗಳಿಸಿ ಟಿ20 ಸ್ವರೂಪದಲ್ಲಿ 12000 ರನ್ ಗಳಿಸಿ ನೆರೆದಿರುವ ಅಭಿಮಾನಿಗಳನ್ನು ಸಂಭ್ರಮಿಸಬೇಕೆಂದು ಕೊಹ್ಲಿ ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ ಪಂದ್ಯದಲ್ಲಿ ತಾವು ಎದುರಿಸಿದ ಮೊದಲ ಎಸೆತದಲ್ಲೇ ಅಫ್ಘನ್ ಯುವ ವೇಗಿ ಫರೀದ್ ಅಹ್ಮದ್ ಎಸೆತದಲ್ಲಿ ಗೋಲ್ಡನ್ ಡಕ್ ಔಟ್ ಆಗಿ ನಿರಾಸೆ ಮೂಡಿಸಿದ್ದರು.
ಆಧುನಿಕ ಕ್ರಿಕೆಟ್ ಜಗತ್ತಿನ ದಿಗ್ಗಜ ವಿರಾಟ್ ಕೊಹ್ಲಿ ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 35 ಬಾರಿ ಗೋಲ್ಡನ್ ಡಕ್ ಔಟ್ ಆಗುವ ಮೂಲಕ ಗಾಡ್ ಆಫ್ ಕ್ರಿಕೆಟ್ ಖ್ಯಾತಿಯ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಅನಗತ್ಯ ದಾಖಲೆ (34 ಬಾರಿ ಡಕ್ ಔಟ್) ತಮ್ಮ ಹೆಗಲೇರಿಸಿಕೊಂಡರು.