ಚೆಲುವಿನ ಚಿತ್ತಾರದ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ನಟಿ ಅಮೂಲ್ಯ (Amulya), ಮದುವೆ ನಂತರ ಸಿನಿಮಾ ರಂಗದಿಂದ ದೂರ ಉಳಿದಿದ್ದರು. ಇದೀಗ ಮತ್ತೆ ಅವರು ಸಿನಿಮಾ (cinema) ರಂಗಕ್ಕೆ ಬರುವ ಕುರಿತು ಸುಳಿವು ನೀಡಿದ್ದಾರೆ. ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ 2024ರ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿದ ಅಮೂಲ್ಯ, ಆಗಲೇ ಎರಡು ಸ್ಕ್ರಿಪ್ಟ್ ಕೇಳಿದ್ದೇನೆ. ಸ್ಕ್ರಿಪ್ಟ್ ಇಷ್ಟವಾದ ತಕ್ಷಣವೇ ತಿಳಿಸುತ್ತೇನೆ ಎಂದಿದ್ದಾರೆ.
ಸಿನಿಮಾ ರಂಗಕ್ಕೆ ಅಮೂಲ್ಯ ಮತ್ತೆ ಮರು ಪ್ರವೇಶ ಮಾಡುತ್ತಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಲೇ ಇತ್ತು. ಆದರೆ, ಅದಕ್ಕೆ ಅಧಿಕೃತತೆ ಇರಲಿಲ್ಲ. ಇಂದು ಸ್ವತಃ ಅಮೂಲ್ಯ ಅವರೇ ಸಿನಿಮಾ ರಂಗಕ್ಕೆ ಮತ್ತೆ ಬರುವ ಕುರಿತು ಮಾತನಾಡಿದ್ದಾರೆ. ಅಭಿಮಾನಿಗಳಿಗೆ ಈ ಮೂಲಕ ಖುಷಿ ಸುದ್ದಿ ಕೊಟ್ಟಿದ್ದಾರೆ.
ಬಾಲ್ಯದಿಂದಲೂ ನಾನು ಸಿನಿಮಾ ರಂಗದ ಜೊತೆನೇ ಬೆಳೆದೋಳು. ನನಗೆ ಸಿನಿಮಾ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಬ್ಯುಸಿನೆಸ್ ಅರ್ಥವಾಗಲ್ಲ. ಹಾಗಾಗಿ ಸಿನಿಮಾವನ್ನೇ ನಾನು ಮಾಡಬೇಕು. ಕಂಡಿತಾ ಮತ್ತೆ ಸಿನಿಮಾ ರಂಗಕ್ಕೆ ಬರ್ತೀನಿ. ಸಿನಿಮಾಗಳನ್ನು ಮಾಡುತ್ತೇನೆ. ಅತೀ ಶೀಘ್ರದಲ್ಲೇ ಎಲ್ಲವನ್ನೂ ತಿಳಿಸ್ತೀನಿ ಅಂದಿದ್ದಾರೆ ಅಮೂಲ್ಯ.