ಭಾರತದ ಚದುರಂಗ ಚತುರ ರಮೇಶ್ ಬಾಬು ಪ್ರಜ್ಞಾನಂದ ಅವರು ಜನವರಿ 16 ( ಮಂಗಳವಾರ) ರಂದು ಇತಿಹಾಸ ಸೃಷ್ಟಿಸಿದ್ದಾರೆ. ನೆದರ್ಲೆಂಡ್ ನ ವಿಜ್ಕ್ ಆನ್ ಝೀ ನಡೆಯುತ್ತಿರುವ ಟಾಟಾ ಸ್ಟೀಲ್ ಚೆಸ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರಿನ್ ಅವರನ್ನು ಮಣಿಸಿ ಚೆಸ್ ಮಾಸ್ಟರ್ ವಿಶ್ವನಾಥನ್ ಆನಂದ್ ನಂತರ ಹಾಲಿ ಚಾಂಪಿಯನ್ ಆಟಗಾರನನ್ನು ಮಣಿಸಿದ 2ನೇ ಭಾರತೀಯ ಎಂಬ ದಾಖಲೆ ಬರೆದಿದ್ದಾರೆ.
ಹಾಲಿ ಚಾಂಪಿಯನ್ ಡಿಂಗ್ ಲಿರಿನ್ ವಿರುದ್ಧ ನಡೆದ 2023ರ ಚೆಸ್ ಟೂರ್ನಿಯ 4ನೇ ಮಾಸ್ಟರ್ಸ್ ಸುತ್ತಿನಲ್ಲಿ ಲಿರಿನ್ (2780 ಅಂಕ) ರಿಂದ ಕ್ಲಾಸಿಕ್ ರೇಟ್ ನಲ್ಲಿ ಪ್ರಜ್ಞಾನಂದ (2743) ಸೋಲು ಕಂಡಿದ್ದರು. ಆದರೆ ಇಂದಿನ ಗೆಲುವು ಸಂತಸ ಮೂಡಿಸಿದೆ ಎಂದು ಹೇಳಿದ್ದಾರೆ.
“ಆರಂಭದಲ್ಲಿ ನಾನು ಪಂದ್ಯವನ್ನು ಸುಲಭವಾಗಿ ಸಮಬಲಗೊಳಿಸಬಹುದು ಎಂದು ಅಂದಾಜಿಸಿದ್ದೆ. ಆದರೆ ಪಂದ್ಯ ಸಾಗುತ್ತಿದ್ದಂತೆ ಎದುರಾಳಿ ಆಟಗಾರ ತಪ್ಪು ಹೆಜ್ಜೆ ಇಟ್ಟಿದ್ದಾರೆ ಎಂದು ನನಗೆ ಅನಿಸಿತು. ನಂತರ ನಾನು ದಾಳವನ್ನು ಮುನ್ನಡೆಸುವಾಗ ಪಂದ್ಯದಲ್ಲಿ ನಾನು ಹಿಡಿತ ಸಾಧಿಸಿದ್ದೇನೆ ಎಂಬ ಭಾವನೆ ಉಂಟಾಗಿತ್ತು” ಎಂದು ಚೆಸ್.ಕಾಮ್ ಗೆ ಆರ್. ಪ್ರಜ್ಞಾನಂದ ತಿಳಿಸಿದ್ದಾರೆ.
ನಾನು ನಿಜಕ್ಕೂ ಉತ್ತಮ ಹಾದಿಯಲ್ಲಿ ಸಾಗುತ್ತಿದ್ದೇನೆ ಎಂದು ಅನಿಸುತ್ತಿದ್ದಾಗಲೇ ನನ್ನ ಒಂದು ಕೆಟ್ಟ ನಿರ್ಧಾರದಿಂದ ಸೋಲಿನ ಹಾದಿ ಹಿಡಿದೆ. ಆದರೆ ಈ ಬಾರಿ ಟೂರ್ನಿಯ ಅಂತಿಮ ಕ್ಷಣದವರೆಗೂ ನನ್ನ ಶಕ್ತಿ ಹಾಗೂ ಕೌಶಲ್ಯವನ್ನು ಉತ್ಕೃಷ್ಟ ಮಟ್ಟದಲ್ಲಿ ಇಟ್ಟುಕೊಳ್ಳಲು ಬಯಸಿದ್ದೇನೆ” ಎಂದು ರಮೇಶ್ ಬಾಬು ಪ್ರಜ್ಞಾನಂದ ತಿಳಿಸಿದ್ದಾರೆ.