ಬೆಂಗಳೂರು: ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧಿಯವರು ಸ್ಪರ್ಧೆ ಮಾಡಿದರೆ ನಮ್ಮದೇನು ಅಭ್ಯಂತರವಿಲ್ಲ, ನಾವು ಸ್ವಾಗತಿಸುತ್ತೇವೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿಯವರು ಕೊಪ್ಪಳದಿಂದ ಸ್ಪರ್ಧೆ ಮಾಡುವ ಸುದ್ದಿ ಬೆನ್ನಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕಾ ಗಾಂಧಿಯವರು ಕೊಪ್ಪಳಕ್ಕೆ ಬರುವುದಾದರೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುತ್ತೇವೆ. ಇಲ್ಲಿಂದ ಅವರು ಸ್ಪರ್ಧಿಸಿದರೆ ಹೆಚ್ಚು ಅಂತರದಿಂದ ಗೆಲ್ಲಿಸುತ್ತೇವೆ ಎಂದಿದ್ದಾರೆ.
ಸಹೋದರ ಹಾಗೂ ಕಳೆದ ಬಾರಿ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ರಾಜಶೇಖರ್ ಹಿಟ್ನಾಳ್ ಜೊತೆ ಬಂದು ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಈ ಬಾರಿಯೂ ಸಹೋದರ ರಾಜಶೇಖರ್ ಹಿಟ್ನಾಳ್ಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ನನ್ನ ಸಹೋದರನಿಗೂ ಟಿಕೆಟ್ ಕೇಳಿದ್ದೇನೆ. ಈ ಬಗ್ಗೆ ಹೈಕಮಾಂಡ್ ತೀರ್ಮಾನದಂತೆ ನಡೆದುಕೊಳ್ಳುತ್ತೇನೆ ಎಂದಿದ್ದಾರೆ.