ಬೆಂಗಳೂರು: ಟೆನ್ನಿಸ್ ಲೋಕದ ದಿಗ್ಗಜ ನೊವಾಕ್ ಜೊಕೊವಿಕ್ ಅವರು ಆಧುನಿಕ ಕ್ರಿಕೆಟ್ ಜಗತ್ತಿನ ದಿಗ್ಗಜ ವಿರಾಟ್ ಕೊಹ್ಲಿಯನ್ನು ಮುಕ್ತ ಕಂಠದಿಂದ ಗುಣಗಾನ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಅವರು ನನ್ನ ಬಗ್ಗೆ ಆಡುವ ಮಾತುಗಳನ್ನು ಕೇಳಲು ತುಂಬಾ ಸಂತೋಷವಾಗುತ್ತದೆ ಎಂದ ಸರ್ಬಿಯಾದ ತಾರೆ, ಕ್ರಿಕೆಟ್ ಲೋಕದ ಸ್ಟಾರ್ ಆಟಗಾರನ ಸಾಧನೆಗಳನ್ನು ಕೇಳಲು ಹೆಮ್ಮೆ ಎನಿಸುತ್ತದೆ ಎಂದು ಹೇಳಿದ್ದಾರೆ.
“ನನಗೆ ವಿರಾಟ್ ಕೊಹ್ಲಿಯನ್ನು ನೇರವಾಗಿ ಭೇಟಿ ಆಗಬೇಕು ಎಂದು ತುಂಬಾ ಅನಿಸುತ್ತದೆ. ಕಳೆದ 10 ರಿಂದ 11 ವರ್ಷಗಳಲ್ಲಿ ನಾನು ಭಾರತಕ್ಕೆ ಒಮ್ಮೆ ಮಾತ್ರ ಭೇಟಿ ನೀಡಿದ್ದೇನೆ. ನವದೆಹಲಿಯಲ್ಲಿ 2 ದಿನಗಳ ಕಾಲ ನಡೆದಿದ್ದ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡಿದ್ದೆ. ಅದು ನಾನು ಭಾರತದಲ್ಲಿ ಕಳೆದ ಸುದೀರ್ಘ ಸಮಯವಾಗಿದೆ. ವಿಶ್ವದಲ್ಲೇ ಅತ್ಯಂತ ಶ್ರೀಮಂತ ಕಲೆ ಹಾಗೂ ಸಂಸ್ಕೃತಿ ಹೊಂದಿರುವ ದೇಶಕ್ಕೆ ಶೀಘ್ರವೇ ಭೇಟಿ ನೀಡಲು ಬಯಸಿದ್ದೇನೆ,” ಎಂದು ಹೇಳಿದ್ದಾರೆ.
ನನಗೆ ಭಾರತದ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಸೇರಿದಂತೆ ಹಲವರ ಜೊತೆಗೆ ವೈಯಕ್ತಿಕವಾಗಿ ವಿಶೇಷ ಬಾಂಧವ್ಯ ಹೊಂದಿದ್ದೇನೆ. ನಾನು ಹಾಗೂ ವಿರಾಟ್ ಕೊಹ್ಲಿ ಹಲವು ವರ್ಷಗಳಿಂದ ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ. ಆದರೆ ವೈಯಕ್ತಿಕವಾಗಿ ಇದುವರೆಗೂ ಭೇಟಿ ಮಾಡಿಲ್ಲ. ಆತ(ಕೊಹ್ಲಿ) ನನ್ನ ಬಗ್ಗೆ ಆಡುವ ಮಾತುಗಳನ್ನು ಕೇಳಲು ಹಿತವಾಗಿರುತ್ತದೆ. ನನಗೆ ಕೊಹ್ಲಿಯ ವೃತ್ತಿ ಜೀವನ ಹಾಗೂ ಸಾಧನೆಗಳನ್ನು ಕೇಳಲು ತುಂಬಾ ಹೆಮ್ಮೆ ಎನಿಸುತ್ತದೆ,” ಎಂದು ನೊವಾಕ್ ಜೊಕೊವಿಕ್ ಹೇಳಿದ್ದಾರೆ.