ಕೋಲಾರ : ಜನವರಿ 15 ಬಂತಂದ್ರೆ ಸಾಕು, ಇಡೀ ದೇಶಕ್ಕೆ ದೇಶವೇ ಸಂಕ್ರಾಂತಿ ಸಂಭ್ರಮದಲ್ಲಿ ತೇಲುತ್ತೆ. ಆದರೆ, ಚಿನ್ನದ ನಾಡು ಕೋಲಾರ ಜಿಲ್ಲೆಯ ಆ ಹಳ್ಳಿಯೊಂದರಲ್ಲಿ ಮಾತ್ರ ಸಂಕ್ರಾಂತಿ ಆಚರಣೆ ಮಾಡಲ್ಲ. ಸಂಕ್ರಾಂತಿ ಅಂದ್ರೆ ಸಾಕು ಊರಿಗೇ ಊರೇ ಶಾಕ್ ಆಗುತ್ತೆ.
ಇದು ಕೋಲಾರ ತಾಲೂಕಿನ ಅರಾಭಿಕೊತ್ತನೂರು ಎಂಬ ಗ್ರಾಮ. ಹೆಚ್ಚುಕಮ್ಮಿ ಜಿಲ್ಲಾಕೇಂದ್ರಕ್ಕೆ ಸಮೀಪವೇ ಇದೆ. ಈ ಊರಲ್ಲಿ ಹತ್ತತ್ತಿರ ಒಂದು ಸಾವಿರ ಮಂದಿ ವಾಸವಿದ್ದಾರೆ. ವಿದ್ಯಾವಂತರೂ ಇದ್ದಾರೆ, ನೌಕರಿಯಲ್ಲಿರೋರು ಇದ್ದಾರೆ. ಆದರೆ, ಅದ್ಯಾಕೋ ಈ ಊರಲ್ಲಿ ನಂಬಿಕೆನೋ ಮೂಢನಂಬಿಕೆನೋ ಗೊತ್ತಿಲ್ಲ. ಸಂಕ್ರಾಂತಿ ಮಾತ್ರ ನಿಷಿದ್ಧ.
500 ವರ್ಷಗಳ ಹಿಂದೆ ಈ ಊರಲ್ಲಿ ಅದ್ದೂರಿ ಸಂಕ್ರಾಂತಿ ಮಾಡಲಾಗಿತ್ತು. ಅದೊಂದು ವರ್ಷ ಊರಿಂದಾಚೆ ಹಾಕಿದ್ದ ಕಿಚ್ಚು ದಾಟಿಕೊಂಡು ಬರಬೇಕಿದ್ದ ಹಸುಗಳು ನಾಪತ್ತೆಯಾಗಿದ್ವು. ಅದರ ಮುಂದಿನ ವರ್ಷ ಸಂಕ್ರಾಂತಿ ಆಚರಿಸಿದಾಗ ದನ-ಕರುಗಳು ಕಾಯಿಲೆಯಿಂದ ಜೀವ ಬಿಟ್ಟಿದ್ವಂತೆ. ಊರವರು ಇನ್ಮುಂದೆ ಸಂಕ್ರಾಂತಿ ಬದಲು ಬಸವಜಯಂತಿ ದಿನ ದನಗಳ ಹಬ್ಬ ಮಾಡ್ತೀವಿ ಅಂತ ಹರಕೆ ಹೊತ್ತರಂತೆ. ಆಗ ಜಾನುವಾರುಗಳ ಸಾವಿನ ಸರಣಿ ನಿಂತಿತ್ತಂತೆ. ಅಂದಿನಿಂದಲೂ ಈ ಊರಲ್ಲಿ ಸಂಕ್ರಾಂತಿ ಮಾಡಲ್ಲ.
ಸಂಕ್ರಾಂತಿ ದಿನ ಅರಾಬಿಕೊತ್ತನೂರು ಗ್ರಾಮಕ್ಕೆ ಸೂತಕದ ದಿನ. ಊರಲ್ಲಿ ಹಬ್ಬದ ಸಂಭ್ರಮವಿರಲ್ಲ. ಜನ ಮತ್ತು ಜಾನುವಾರಗಳು ಸಿಂಗಾರ ಮಾಡಲ್ಲ. ಒಟ್ನಲ್ಲಿ, ಕಾಲ ಅದೆಷ್ಟೇ ಮುಂದುವರೆಯಲಿ ಕೆಲವೊಂದು ವಿಚಾರಗಳು ವಿಜ್ಞಾನಕ್ಕೂ ನಿಲುಕಲ್ಲ. ನಾಡಿಗೆಲ್ಲಾ ಸಂಕ್ರಾಂತಿ ಖುಷಿ ಆದರೆ, ಈ ಊರಲ್ಲಿ ಮಾತ್ರ ಸುಗ್ಗಿನೂ ಇಲ್ಲ, ಸಂಕ್ರಾಂತಿನೂ ಇಲ್ಲ ಅನ್ನೋದೇ ವಿಶೇಷ.