ಟೆಲಿಕಾಂ ಪೂರೈಕೆದಾರ ಭಾರತಿ ಏರ್ಟೆಲ್ (Bharti Airtel) ಇತ್ತೀಚಿಗೆ ಗೂಗಲ್ನ (Google) ಮಾತೃಸಂಸ್ಥೆಯೊಂದಿಗೆ ತನ್ನ ಪಾಲುದಾರಿಕೆಯನ್ನು ಹೊಂದಿದ್ದು, ಭಾರತದ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಲೇಸರ್ ಇಂಟರ್ನೆಟ್ (Laser Internet) ಮೂಲಕ ಹೆಚ್ಚಿನ ಇಂಟರ್ನೆಟ್ ಸೇವೆಯನ್ನು ಒದಗಿಸಲು ಪ್ರಯತ್ನಿಸುತ್ತಿದೆ.
ಈ ಕಂಪನಿಗಳು ವೇಗದ ಇಂಟರ್ನೆಟ್ ಸೇವೆಯನ್ನು ತಲುಪಿಸುವ ಸಲುವಾಗಿ ಬೆಳಕಿನ ಕಿರಣಗಳನ್ನು (ಲೇಸರ್) ಬಳಸುವ ಹೊಸ ತಂತ್ರಜ್ಞಾನವನ್ನು ಬಳಸುತ್ತಿದೆ. ಈ ಎರಡು ಕಂಪನಿಗಳು ಈ ಕುರಿತು ಶೋಧನೆಯನ್ನು ಮಾಡಿ ಭಾರತದ ವಿವಿಧೆಡೆ ಇದನ್ನು ಪರೀಕ್ಷಿಸಿದ್ದು, ಪ್ರಾಯೋಗಿಕ ಪರೀಕ್ಷೆಯು ಯಶಸ್ವಿಯಾಗಿವೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚಿನ ಲೇಸರ್ ಆಧಾರಿತ ಇಂಟರ್ನೆಟ್ ತಂತ್ರಜ್ಞಾನವನ್ನು ಆಲ್ಫಾಬೆಟ್ನ ಕ್ಯಾಲಿಫೋರ್ನಿಯಾ ಇನ್ನೋವೇಶನ್ ಲ್ಯಾಬ್ನಲ್ಲಿ ಅಭಿವೃದ್ಧಿಪಡಿಸಿದ್ದು, ಇದನ್ನು ಎಕ್ಸ್ (X) ಎಂದು ಕರೆಯಲಾಗುತ್ತದೆ. ಈ ಯೋಜನೆಯನ್ನು ‘ತಾರಾ’ (Taara) ಎಂದು ಕರೆಯಲಾಗುತ್ತದೆ. ವೇಗದ ಇಂಟರ್ನೆಟ್ ಸೇವೆಯನ್ನು ಒದಗಿಸುವ ಸಲುವಾಗಿ ಈ ತಂತ್ರಜ್ಞಾನವು ಬೆಳಕಿನ ಕಿರಣಗಳನ್ನು ಬಳಸುತ್ತದೆ. ಫೈಬರ್ ರೀತಿಯಲ್ಲಿ ಕೇಬಲ್ಗಳಿಲ್ಲದೇ ಪ್ರಾಜೆಕ್ಟ್ ತಾರಾ ಅತ್ಯಂತ ಕಿರಿದಾದ ಮತ್ತು ಅಗೋಚರ ಕಿರಣದ ರೂಪದಲ್ಲಿ ಗಾಳಿಯ ಮೂಲಕ ಅತಿ ಹೆಚ್ಚು ವೇಗದಲ್ಲಿ ಮಾಹಿತಿಯನ್ನು ರವಾನಿಸಲು ಲೇಸರ್ ಅನ್ನು ಬಳಸುತ್ತದೆ ಎಂದು ಆಲ್ಫಾಬೆಟ್ನ ವೆಬ್ಸೈಟ್ ತಿಳಿಸಿದೆ. ಈ ತಂತ್ರಜ್ಞಾನವು 20 ಜಿಬಿಪಿಎಸ್ (GBPS) ವೇಗದಲ್ಲಿ ಡೇಟಾವನ್ನು ರವಾನಿಸುತ್ತದೆ ಎಂದು ಖಚಿತಪಡಿಸಿದೆ
ತಾರಾ ಎಂಬುದು ಆಲ್ಫಾಬೆಟ್ನ ಇನ್ನೋವೇಶನ್ ಲ್ಯಾಬ್ನ ಒಂದು ಭಾಗವಾಗಿದೆ. ಇದನ್ನು ‘ಮೂನ್ ಶಾಟ್ ಫ್ಯಾಕ್ಟರಿ’ ಎಂದು ಇನ್ನೊಂದು ಹೆಸರಿನಲ್ಲಿ ಕರೆಯಲಾಗುತ್ತದೆ. ಎಕ್ಸ್ ಎಂಬುದು ಆಲ್ಫಾಬೆಟ್ನ ಸಂಶೋಧನಾ ವಿಭಾಗವಾಗಿದೆ. 2011ರಲ್ಲಿ ಆಲ್ಫಾಬೆಟ್ ಅಂಗಸಂಸ್ಥೆ ಗೂಗಲ್ ಎಕ್ಸ್ ಕ್ಯಾಲಿಫೋರ್ನಿಯಾದಲ್ಲಿ ತನ್ನ ಕೆಲಸ ಆರಂಭಿಸಿತು. 2013ರಲ್ಲಿ ಗೂಗಲ್ ಈ ಯೋಜನೆಯನ್ನು ಆರಂಭಿಸಿದ್ದು, ಈ ಪ್ರಾಜೆಕ್ಟ್ ಅನ್ನು ಲೂನ್ ಎಂದು ಕರೆಯಲಾಯಿತು. ಎತ್ತರದ ಬಲೂನ್ಗಳಲ್ಲಿ ಲೇಸರ್ ಆಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಕಡಿಮೆ ಮತ್ತು ಪ್ರತ್ಯೇಕವಾದ ಸಮುದಾಯಗಳಿಗೆ 3G ಇಂಟರ್ನೆಟ್ ಸೇವೆಯನ್ನು ಒದಗಿಸುವುದು ಇದರ ಉದ್ಧೇಶವಾಗಿತ್ತು. ಆದರೆ ವೆಚ್ಚ ಹೆಚ್ಚಾಗಿದ್ದರಿಂದ ಮತ್ತು ಸಂಕೀರ್ಣತೆಗಳ ಕಾರಣಗಳಿಂದ ಈ ಯೋಜನೆಯನ್ನು 2021ರಲ್ಲಿ ರದ್ದುಗೊಳಿಸಲಾಯಿತು. ಆದರೆ ಯೋಜನೆಗಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನವು ತಾರಾ ಪ್ರಾಜೆಕ್ಟ್ ಉದಯವಾಗಲು ಕಾರಣವಾಯಿತು.