ಬಳ್ಳಾರಿ: ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಹೆಣ್ಣುಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಲವಾರು ಮಹಿಳಾ ಸಬಲೀಕರಣ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಕೊಪ್ಪಳ ಜಿಲ್ಲೆಯ ಹನುಮಸಾಗರ ಗ್ರಾಮದ ಅವನಿ ಗಂಗಾವತಿ ಜ.24 ರಂದು ಒಂದು ದಿನದ ಮಟ್ಟಿಗೆ ಕೊಪ್ಪಳ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಅವನಿ ಗಂಗಾವತಿ ಬಳ್ಳಾರಿಯ ಕೇಂದ್ರೀಯ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದು ಕಲೆ, ಸಂಗೀತ, ಸಾಹಿತ್ಯ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದಾರೆ. ಕಳೆದ 2022 ರಲ್ಲಿ ಕೊಪ್ಪಳದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಹೆಣ್ಣು ಮಕ್ಕಳಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಅಸಾಧಾರಣ ಪ್ರತಿಭೆ’ಯಾಗಿ ಹೊರ ಹೊಮ್ಮಿದ್ದರು.
ಹೋದ ವರ್ಷ ದೇಶದಲ್ಲಿ ಆಚರಿಸಲ್ಪಟ್ಟಿದ್ದ 72ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಸತತ 6 ತಿಂಗಳುಗಳ ಕಾಲ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ವಿಭಾಗಗಳಲ್ಲಿ ತರಬೇತಿ ಪಡೆದಿದ್ದರು. ಎನ್ ಸಿ ಸಿ ವಿಂಗ್ ನ ಮುಂಚೂಣಿ ವಹಿಸಿದ್ದು, ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಮ್ಮ ತಂಡದೊಂದಿಗೆ ಕರ್ನಾಟಕದಿಂದ ಪ್ರತಿನಿಧಿಸಿದ್ದರು.
ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಮತ್ತು ರಾಷ್ಟ್ರವನ್ನು ಪ್ರತಿನಿಧಿಸುವ ಪ್ರಮುಖರ ಸಮ್ಮುಖದಲ್ಲಿ ಕರ್ನಾಟಕದ ತಂಡದೊಂದಿಗೆ ಸಾಂಸ್ಕøತಿಕ ಹಾಗೂ ಎನ್ಸಿಸಿ ವಿಭಾಗದಲ್ಲಿ ದಕ್ಷತೆಯನ್ನು ಪ್ರದರ್ಶಿಸಿದ್ದರು.
ಇಂದು ಸಮಾಜದಲ್ಲಿ ಮಹಿಳೆಯರನ್ನು ಅಗೌರವದಿಂದ ನೋಡಲಾಗುತಿದೆ. ಹೆಣ್ಣು ಭ್ರೂಣ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆ. ಮಹಿಳೆಯರ ಬಗ್ಗೆ ಸಮಾಜದಲ್ಲಿ ಗೌರವದಿಂದ ಕಾಣಲು ಮತ್ತು ಮಹಿಳಾ ಭ್ರೂಣ ಹತ್ಯೆ ತಡೆಯುವುದು ಎಲ್ಲರ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹೆಣ್ಣುಮಕ್ಕಳಿಗೆ ಪ್ರೋತ್ಸಾಹಿಸುವ ಉದ್ದೇಶ ಸರ್ಕಾರ ಹೊಂದಿದೆ.
ಮಹಿಳೆಯರನ್ನು ಸಮಗ್ರವಾಗಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ರೀತಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಂದುವರಿದಿರುವುದು ನಾಗರಿಕರ ಪ್ರಸಂಶೆಗೆ ಪಾತ್ರವಾಗಿದೆ.