ಕೆ.ಆರ್.ಪುರ:– ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ, ಚೆನ್ನಬಸವಣ್ಣ ಮತ್ತು ಸಿದ್ದರಾಮೇಶ್ವರರು ಶರಣ ಸಂಸ್ಕೃತಿಯ ಪಂಚ ಹರಿಕಾರರೆಂದೇ ಹೆಸರಾದವರು. ಅವರಲ್ಲಿ ಶ್ರೀ ಗುರು ಸಿದ್ದರಾಮೇಶ್ವರರು ಕಾಯಕಯೋಗಿ, ಶಿವಯೋಗಿ, ಕರ್ಮಯೋಗಿ ಎಂದೇ ಪ್ರಸಿದ್ಧರು ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ಬೆಂಗಳೂರು ಪೂರ್ವ ತಾಲ್ಲೂಕು ಆಡಳಿತ ವತಿಯಿಂದ ಏರ್ಪಡಿಸಿದ್ದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿಯನ್ನು ಬಾಗಲಕೋಟೆಯ ಭೋವಿ ಗುರುಪೀಠ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನದ ಶ್ರೀ ನಿರಂಜನ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು.
ಮಾಜಿ ಸಚಿವ, ಭೋವಿ ಜನಾಂಗದ ನಾಯಕ ಅರವಿಂದ ಲಿಂಬಾವಳಿ ಅವರು ಮಾತನಾಡಿ, ಧರ್ಮಸ್ಥಳ- ಮಂತ್ರಾಲಯದಂತೆ ನಮ್ಮ ಮಠದಲ್ಲೂ ಅನ್ನದಾಸೋಹ ನಿತ್ಯವೂ ಆಗಬೇಕು ಅದಕ್ಕೆ ನಾವೆಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಮಹಾರಾಷ್ಟ್ರದ ಸೊನ್ನಲಾಪುರದಲ್ಲಿ 12ನೇ ಶತಮಾನದಲ್ಲಿ ಜನಿಸಿದ ಸಿದ್ದರಾಮೇಶ್ವರರು ಸಮಾಜದ ಮೇಲು ಕೀಳು, ವರ್ಣಭೇದದ ವಿರುದ್ಧ ಹೋರಾಡಿದ್ದರು. ಕೆಲಸ ಮಾಡದೆ ಉಣ್ಣಬಾರದು ಎನ್ನುವುದು ಅವರ ಪ್ರತಿಪಾದನೆ. ಸಿದ್ದರಾಮೇಶ್ವರರು ವಚನ, ಸ್ವರ ವಚನ, ಬಸವ ಸ್ತೋತ್ರದ ತ್ರಿವಿಧಿ, ಅಷ್ಟಾವರಣ ಸ್ತೋತ್ರದ ತ್ರಿವಿಧಿ, ಸಂಕೀರ್ಣ ತ್ರಿವಿಧಿ ಮುಂತಾದ ವೈವಿಧ್ಯಮಯ ಸಾಹಿತ್ಯವನ್ನು ರಚಿಸಿದ್ದಾರೆ. ಇವರ ಸಾವಿರಕ್ಕೂ ಹೆಚ್ಚು ವಚನಗಳು ಲಭ್ಯವಿದೆ. ಹೀಗೆ ಸಮಾಜವನ್ನು ಹೊಸ ದಿಕ್ಕಿನೆಡೆಗೆ ಕರೆದೊಯ್ದ ಗುರು ಸಿದ್ದರಾಮೇಶ್ವರರು ಸದಾಕಾಲ ಸ್ಮರಣೀಯರು ಎಂದು ಹೇಳಿದರು.
ಬಾಲ್ಯದಿಂದಲೂ ಮಹಾ ಶಿವಭಕ್ತರಾಗಿದ್ದ ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರ ಬದುಕು ಮತ್ತು ಸೇವೆ ನಮ್ಮೆಲ್ಲರಿಗೂ ಆದರ್ಶ. ಊರಿಗೆ ಉಪಕಾರಿಯಾದ ಅವರು ಭಕ್ತಿಯ ಜೊತೆಗೆ ಸೇವೆಯ ಮಹತ್ವವನ್ನೂ ಸಾರಿದ್ದರು. ವಿದ್ಯೆಯೆಂಬುದು ಅಭ್ಯಾಸಿಗನ ಕೈವಶ, ಅವಿದ್ಯೆಯೆಂಬುದು ಸರ್ವರಲ್ಲಿ ವಶ ಎಂಬ ತಮ್ಮ ವಚನದ ಮೂಲಕ ಪ್ರಯತ್ನದ ಫಲವನ್ನು ಸಾರಿದವರು ಅವರು. ಅವರು ತೋರಿದ ದಾರಿಯಲ್ಲಿ ನಾವು ಮುನ್ನಡೆಯೋಣ ಎಂದು ಕರೆ ನೀಡಿದರು.
ಶಿವಯೋಗಿ ಸಿದ್ಧರಾಮೇಶ್ವರರು 68 ಸಾವಿರ ವಚನಗಳನ್ನು ರಚಿಸಿ ಹಾಡಿದ್ದಾರೆ. ಅವುಗಳ ಪೈಕಿ ಈಗ 1,679 ವಚನಗಳು ಮಾತ್ರ ಲಭಿಸಿವೆ. ಬಸವಣ್ಣ ಹಾಗೂ ಸಿದ್ದರಾಮೇಶ್ವರ ಶಿವಯೋಗಿಗಳು ಶ್ರೇಷ್ಠ ವಚನಕಾರರಾಗಿದ್ದರು. ಬಸವಣ್ಣನವರು ಸಾಮಾಜಿಕವಾಗಿ ಹೆಚ್ಚು ಒತ್ತು ಕೊಡುತ್ತಿದ್ದರು. ಸಿದ್ದರಾಮೇಶ್ವರರು ಸಮಾಜ ಸೇವೆಯಲ್ಲಿ ತೃಪ್ತಿ ಪಡೆಯುತ್ತಿದ್ದರು ಎಂದು ತಿಳಿಸಿದರು.
ಅಲ್ಲಮ ಪ್ರಭು ಅಲ್ಲಮ ಮಂಟಪದ ಸದನವನ್ನು ಸಿದ್ದರಾಮೇಶ್ವರರು ನಡೆಸುತ್ತಿದ್ದರು. 12 ನೇ ಶತಮಾನದಲ್ಲಿ ಕೆರೆಕಟ್ಟೆಗಳನ್ನು ನಿರ್ಮಾಣ ಮಾಡಿದವರು. ಆಗಲೇ ಲೋಕೋಪಯೋಗಿ ಕೆಲಸ ಮಾಡುವ ಜವಾಬ್ದಾರಿಯನ್ನ ನಿಭಾಯಿಸಿದ್ದಾರೆ,
ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಮೂರನೇ ಅಧ್ಯಕ್ಷರಾಗಿ ಅವರು ಸಮಾಜದಲ್ಲಿ ಕೆಲಸ ಮಾಡಿದ್ದಾರೆ ಎಂದು ಸಿದ್ದರಾಮೇಶ್ವರ ಸ್ವಾಮಿಗಳ ಇತಿಹಾಸವನ್ನ ಮೆಲುಕು ಹಾಕಿದರು.
ಶಾಸಕ ಬೈರತಿ ಬಸವರಾಜ್ ಮಾತನಾಡಿ, ಭೋವಿ ಜನಾಂಗದ ರಜತಾ ಮಹೋತ್ಸವಕ್ಕೆ ವೈಯಕ್ತಿಕವಾಗಿ 10 ಲಕ್ಷ ರೂ.ಗಳು ನೀಡುತ್ತೇನೆ ಎಂದು ಶಾಸಕ ಬೈರತಿ ಬಸವರಾಜ ಘೋಷಣೆ ಮಾಡಿದರು.
ದೇವಾಲಯಗಳು, ಕೆರೆ ಕಟ್ಟೆಗಳು, ಕಲ್ಯಾಣಿ ಗಳನ್ನು ನಿರ್ಮಿಸುವ ಮೂಲಕ ಅಭಿವೃದ್ಧಿ ಕೆಲಸಗಳನ್ನುಮಾಡಿದವರು ಸಿದ್ಧರಾಮೇಶ್ವರ ಸ್ವಾಮಿ ಎಂದು ಹೇಳಿದರು.
ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಸಿದ್ಧರಾಮೇಶ್ವರ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಲು ತೀರ್ಮಾನಿಸಿದ್ದರು ಎಂದರು.
ಕಳೆದ ಬಿಜೆಪಿ ಸರ್ಕಾರದಲ್ಲಿ ಮಠಗಳಿಗೆ ನೂರಾರು ಕೋಟಿ ಅನುದಾನ ನೀಡಿದ್ದೆವು ಇದರ ಉಸ್ತುವಾರಿ ನಾನೇ ವಹಿಸಿದ್ದೆ. ಅದರ ಫಲವಾಗಿ ಭೋವಿ ಮಠಕ್ಕೂ ಅನುದಾನ ದೊರೆತಿದೆ ಕಳೆದ ಐದಾರು ವರ್ಷಗಳಿಂದ ಭೋವಿ ಮಠದೊಂದಿಗೆ ನನ್ನ ಭಾಂದವ್ಯ ಉತ್ತಮವಾಗಿದ್ದು ಮಠದ ಸ್ವಾಮಿಗಳ ಅನೇಕ ಕಾರ್ಯಕ್ರಮಗಳಲ್ಲಿ ಭಾಗಯಾಗಿದ್ದೆನೆ ಎಂದು ತಿಳಿಸಿದರು.
ಸಮಾಜ ಸಂಘಟಿತವಾಗಬೇಕು ಕಷ್ಟ,ಸುಖಕ್ಕೆ ಭಾಗಿಯಾದ ನಾಯಕನ ಕೈ ಬಿಡಬೇಡಿ ಎಂದು ಮನವಿ ಮಾಡಿದರು.
ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಮಾತನಾಡಿ, ಭೋವಿ ಜನಾಂಗದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಿ. ಸಿದ್ಧರಾಮೇಶ್ವರರು ಎಲ್ಲರಿಗೂ ಆದರ್ಶರಾಗಿದ್ದವರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಾಗಲಕೋಟೆ-ಚಿತ್ರದುರ್ಗ ಭೊವಿ ಗುರುಪೀಠ ಪೀಠಾದ್ರಕ್ಷ ಶ್ರೀ ಇಮ್ಮಡಿ ನಿರಂಜನ ಸಿದ್ಧರಾಮೇಶ್ವರ ಸ್ವಾಮೀಜಿ, ಗ್ರೇಡ್ -2 ತಹಶೀಲ್ದಾರ್ ಶೇಖರ್, ಬಿಇಒ ರಾಮಮೂರ್ತಿ, ಪಾಲಿಕೆ ಮಾಜಿ ಸದಸ್ಯರಾದ ಸುರೇಶ್, ರಾಧಮ್ಮ ವೆಂಕಟೇಶ್, ಮುಖಂಡರಾದ ಬೆಳಂದೂರು ಸುರೇಶ್, ಬಾಲಕೃಷ್ಣ, ಚಿನ್ನಪ್ಪ ರಾಜು, ಬಿ.ಎಂ.ಕೃಷ್ಣ, ಇಟಾಚಿ ಮಂಜು, ಲೋಕೇಶ್, ಸಾಕಮ್ಮ ಮತ್ತಿತರರಿದ್ದರು.