ಹುಬ್ಬಳ್ಳಿ; ನನ್ನನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳಬೇಕೆಂಬುದು ಹಲವು ನಾಯಕರ ಒತ್ತಾಸೆ ಆಗಿದ್ದು ಯಾವುದೇ ಕಾರಣಕ್ಕೂ ಘರ್ ವಾಪ್ಸಿ ಪ್ರಶ್ನೆಯೇ ಇಲ್ಲ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನ ವಿಧಾನ ಪರಿಷತ್ ಹಿರಿಯ ಸದಸ್ಯ ಜಗದೀಶ್ ಶೆಟ್ಟರ್ ಹೇಳಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ನನಗೆ ಆಗಿರೋ ಅಪಮಾನವನ್ನು ನಾನು ಇನ್ನೂ ಮರೆತಿಲ್ಲ, ನಾನು ಬಿಜೆಪಿ ತೊರೆದ ನಂತರ ಆಗಿರೋ ಹಾನಿ ಬಗ್ಗೆ ಅವರಿಗೆ ಮನವರಿಕೆಯಾಗಿದೆ ಈ ನಿಟ್ಟಿನಲ್ಲಿ ಕೆಲವರು ನನ್ನನ್ನು ವಾಪಸ್ ಕರೆತರುವ ಪ್ರಯತ್ನದಲ್ಲಿ ಇದ್ದಾರೆ.
ದೊಡ್ಡ ಮಟ್ಟದ ಯಾವುದೇ ನಾಯಕರೂ ನನ್ನನ್ನು ಸಂಪರ್ಕಿಸಿಲ್ಲ ಆದರೆ ಹಲವಾರು ನಾಯಕರು ವಾಪಸ್ ತರುವಂತೆ ಒತ್ತಡ ಹಾಕ್ತಿರೋ ಮಾಹಿತಿ ಇದ್ದು, ಯಾರು ಏನೇ ಪ್ರಯತ್ನ ಮಾಡಿದ್ರು ನಾನು ಬಿಜೆಪಿಗೆ ವಾಪಾಸ್ಸಾಗಲ್ಲ ಎಂದರು. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಅನಂತಕುಮಾರ್ ಹೆಗಡೆ ಏಕವಚನದಲ್ಲಿ ವಾಗ್ದಾಳಿ ವಿಚಾರ ಕುರಿತು ಸಹ ಮಾತನಾಡಿದ ಅವರು ಅನಂತ್ ಕುಮಾರ್ ಹೆಗಡೆ ಹದ್ದು ಮೀರಿ ವರ್ತಿಸುತ್ತಿದ್ದಾರೆ. ಲಕ್ಷ್ಮಣ ರೇಖೆ ದಾಟಿ ಮಾತನಾಡುತ್ತಿದ್ದಾರೆ. ಇಷ್ಟುದಿನ ನಾಪತ್ತೆಯಾದವರು ಈಗ ದಿಢೀರ್ ಪ್ರತ್ಯಕ್ಷರಾಗಿದ್ದಾರೆ.
ಲೋಕಸಭೆ ಚುನಾವಣೆ ದೃಷ್ಟಿಯಿಂದ ತುಂಬಾ ಆ್ಯಕ್ಟೀವ್ ಆಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮೋದಿ ತಮ್ಮ ಜಿಲ್ಲೆಗೆ ಬಂದಾಗ ಇವರು ಎಲ್ಲಿ ಹೋಗಿದ್ದರು? ಈಗ ಬಂದು ಬಾಯಿಗೆ ಬಂದಂತೆ ಮಾತಾಡ್ತಿದ್ದಾರೆ. ಸಂವಿಧಾನಿಕ ಹುದ್ದೆಯಲ್ಲಿದ್ದವರ ಮೇಲೆ ಈ ರೀತಿ ಮಾತಾಡೋದು ಸರಿಯಲ್ಲ. ಪ್ರಧಾನಿ ಮೋದಿ ಬಗ್ಗೆ ಈ ರೀತಿ ಮಾತನಾಡಿದರೆ ಸುಮ್ಮನೆ ಇರುತ್ತಾರಾ? ಎಂದು ಪ್ರಶ್ನೆ ಮಾಡಿದರು