ಒಂದೆರಡು ಅಥವಾ ಹೆಚ್ಚು ಅಪಾಯ ಅಂಶಗಳು ಇದ್ದರೆ ಸ್ತನದ ಕ್ಯಾನ್ಸರ್ ಉಂಟಾಗುವುದು ಖಚಿತ ಎಂದು ಹೇಳಲು ಸಾಧ್ಯವಿಲ್ಲ; ಹಾಗೆಯೇ ಯಾವುದೇ ಅಪಾಯ ಅಂಶಗಳು ಇಲ್ಲದವರು ಕೂಡ ಸ್ತನದ ಕ್ಯಾನ್ಸರ್ಗೆ ತುತ್ತಾಗಬಹುದು ಎಂಬುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು.
ಸ್ತನದ ಕ್ಯಾನ್ಸರ್ ಆರಂಭಿಕ ಹಂತಗಳಲ್ಲಿ ಗಮನಾರ್ಹ ಲಕ್ಷಣಗಳನ್ನು ಪ್ರಕಟಿಸದೆ ಇರಬಹುದು. ಹೀಗಾಗಿ ಮ್ಯಾಮೊಗ್ರಾಮ್ ನಂತಹ ತಪಾಸಣೆಗಳನ್ನು ನಿಯಮಿತವಾಗಿ ಮಾಡಿಸಿಕೊಳ್ಳುವುದು ಶೀಘ್ರವಾಗಿ ಈ ರೋಗವನ್ನು ಪತ್ತೆಹಚ್ಚುವುದಕ್ಕೆ ನಿರ್ಣಾಯಕವಾಗಿವೆ; ಯಾಕೆಂದರೆ ಲಕ್ಷಣಗಳು ಗಮನಕ್ಕೆ ಬರುವ ವೇಳೆಗೆ ಸ್ತನದ ಕ್ಯಾನ್ಸರ್ ಮುಂದುವರಿದ ಹಂತಗಳನ್ನು ಮುಟ್ಟಿರುವ ಅಪಾಯ ಇರುತ್ತದೆ.
ಸ್ತನದ ಕ್ಯಾನ್ಸರ್ ತಪಾಸಣೆಯಲ್ಲಿ ಸ್ತನದ ಅಂಗಾಂಶಗಳ ಎಕ್ಸ್ರೇ ಪರೀಕ್ಷೆಯಾಗಿರುವ ಮ್ಯಾಮೊಗ್ರಾಮ್ ಒಳಗೊಂಡಿರುತ್ತದೆ. ಇದರ ಉದ್ದೇಶ ಲಕ್ಷಣಗಳು ಪ್ರಕಟವಾಗುವುದಕ್ಕೆ ಮುನ್ನವೇ, ಆರಂಭಿಕ ಹಂತಗಳಲ್ಲಿಯೇ ಗಡ್ಡೆಯಂತಹ ಅಸಹಜತೆಗಳನ್ನು ಪತ್ತೆಹಚ್ಚುವುದು. ನಿಯಮಿತವಾಗಿ ಇಂತಹ ತಪಾಸಣೆಗಳನ್ನು ಮಾಡಿಸಿಕೊಳ್ಳುವುದು, ವಿಶೇಷವಾಗಿ 40 ವರ್ಷ ವಯಸ್ಸು ದಾಟಿರುವ ಮಹಿಳೆಯರಿಗೆ ಆದಷ್ಟು ಬೇಗನೆ ಈ ಕಾಯಿಲೆಯನ್ನು ಪತ್ತೆಹಚ್ಚಿ ಯಶಸ್ವಿಯಾಗಿ ಚಿಕಿತ್ಸೆ ಪಡೆದುಕೊಳ್ಳುವುದಕ್ಕೆ ಬಹಳ ಮುಖ್ಯವಾಗಿದೆ. ಸ್ತನದ ವೈದ್ಯಕೀಯ ತಪಾಸಣೆ ಮತ್ತು ವೈಯಕ್ತಿಕವಾಗಿ ಪರೀಕ್ಷೆ ಮಾಡಿಕೊಳ್ಳುವುದು ಕೂಡ ಸ್ತನದ ಆರೋಗ್ಯದ ಮೇಲೆ ನಿಗಾ ಇರಿಸಿಕೊಳ್ಳುವಲ್ಲಿ ನಿರ್ಣಾಯಕವಾಗಿದೆ.
ಸ್ತನದ ಕ್ಯಾನ್ಸರ್ನ ಕೌಟುಂಬಿಕ ಹಿನ್ನೆಲೆ ಹೊಂದಿರುವವರು ಈ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುವುದರಿಂದ ವ್ಯಕ್ತಿನಿರ್ದಿಷ್ಟ ತಪಾ ಸಣೆಯ ಕಾರ್ಯವಿಧಾನಗಳು ಅತ್ಯುಪಯುಕ್ತ ವಾಗಿವೆ. ನಿಕಟ ಬಂಧುಗಳು ಸ್ತನದ ಕ್ಯಾನ್ಸರ್ ಗೆ ತುತ್ತಾಗಿರುವ ಹಿನ್ನೆಲೆ ಇದ್ದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಶಿಫಾರಸು ಮಾಡಲಾಗುವ ವಯಸ್ಸಿಗಿಂತ ಬೇಗನೇ ತಪಾಸಣೆಯನ್ನು ಆರಂಭಿಸುವುದು ಉತ್ತಮ. ಬಿಆರ್ಸಿಎಯಂತಹ ವಂಶವಾಹಿಗಳಲ್ಲಿ ಮ್ಯುಟೇಶನ್ನಂತಹ ನಿರ್ದಿಷ್ಟ ವಂಶವಾಹಿ ಅಪಾಯಗಳನ್ನು ವಿಶ್ಲೇಷಿಸುವುದಕ್ಕಾಗಿ ವಂಶವಾಹಿ ಆಪ್ತಸಮಾಲೋಚನೆ ಮತ್ತು ಪರೀಕ್ಷೆಗಳನ್ನು ಕೂಡ ಪರಿಗಣಿಸಬಹುದಾಗಿದೆ.
ಸ್ತನದ ಕ್ಯಾನ್ಸರ್ನ ಕೌಟುಂಬಿಕ ಹಿನ್ನೆಲೆ ಹೊಂದಿರುವವರು ತಮ್ಮ ಅಪಾಯ ಸಾಧ್ಯತೆಯ ಬಗ್ಗೆ ಆಂಕಾಲಜಿಸ್ಟ್ ಬಳಿ ಸಮಾಲೋಚಿಸುವುದು ಬಹಳ ಮುಖ್ಯವಾಗಿದೆ