ಬೆಂಗಳೂರು:- ತಮ್ಮ ರಾಸಲೀಲೆ ಕಂಡ ಪತಿಯನ್ನು ರುಬ್ಬುವ ಕಲ್ಲು ಎತ್ತಿ ಹಾಕಿ ಹತ್ಯೆಗೈದು, ಬಳಿಕ ಆಯ ತಪ್ಪಿ ಬಿದ್ದು ಮೃತಪಟ್ಟಿದ್ದಾರೆ ಎಂದು ಕಥೆ ಸೃಷ್ಟಿಸಿದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಎಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರಿಂದ ಬಂಧಿಸಿದ್ದಾರೆ. ಎಚ್ಎಸ್ಆರ್ ಲೇಔಟ್ 2ನೇ ಸೆಕ್ಟರ್ನ ನಂದಿನಿ ಬಾಯಿ (22) ಮತ್ತು ಆಕೆಯ ಪ್ರಿಯಕರ ನಿತೀಶ್ ಕುಮಾರ್ (22) ಬಂಧಿತರು. ಆರೋಪಿಗಳು ಜ.9ರಂದು ರಾತ್ರಿ ವೆಂಕಟರಮಣ ನಾಯಕ್ (30) ಎಂಬಾತನ ಮೇಲೆ ರುಬ್ಬುವ ಕಲ್ಲು ಎತ್ತಿ ಹಾಕಿ ಕೊಲೆಗೈದಿದ್ದರು. ಈ ಸಂಬಂಧ ಮೃತನ ತಂದೆ ಲಕ್ಷ್ಮೀ ನಾಯಕ್ ಎಂಬುವರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಮದುವೆಯ ಆರಂಭದಲ್ಲಿ ದಂಪತಿ ಅನೋನ್ಯವಾಗಿದ್ದರು. ಆ ಬಳಿಕ ಪತ್ನಿ ನಂದಿನಿ ಸಣ್ಣ-ಪುಟ್ಟ ವಿಚಾರಗಳಿಗೆ ಜಗಳ ತೆಗೆದು ತವರು ಮನೆಗೆ ಹೋಗುತ್ತಿದ್ದಳು. ಅಲ್ಲದೆ, ತನ್ನ ಮೂರು ವರ್ಷದ ಮಗಳನ್ನು ತನ್ನ ತವರು ಮನೆಯಲ್ಲೇ ಬಿಟ್ಟಿದ್ದಳು. ಈ ಮಧ್ಯೆ ತನ್ನ ವಿದ್ಯಾರ್ಥಿ ಜೀವನದ ಗೆಳೆಯನ ಜತೆ ಮೊಬೈಲ್ ನಲ್ಲಿ ಹೆಚ್ಚು ಮಾತನಾಡುತ್ತಿದ್ದಳು. ಈ ವಿಚಾರ ತಿಳಿದ ಪತಿ ವೆಂಕಟರಮಣ ಪತ್ನಿ ಜತೆ ಜಗಳ ಮಾಡಿದ್ದ. ಬಳಿಕ ಇಬ್ಬರ ಕುಟುಂಬದ ಹಿರಿಯರು ರಾಜೀಸಂಧಾನ ಮಾಡಿದ್ದರು ಎಂಬುದು ಗೊತ್ತಾಗಿದೆ.
ಪತಿ ಹಾಗೂ ಹಿರಿಯರು ಎಚ್ಚರಿಕೆ ನೀಡಿದರೂ ನಂದಿನಿ, ಪ್ರಿಯಕರ ಜತೆಗಿನ ಮಾತುಕತೆ ಮುಂದುವರಿಸಿದ್ದಳು. ಅಲ್ಲದೆ, ಬೆಂಗಳೂರಿಗೆ ಕರೆಸಿಕೊಂಡು ದೈಹಿಕ ಸಂಪರ್ಕ ಬೆಳೆಸುತ್ತಿದ್ದಳು. ಜ.9ರಂದು ರಾತ್ರಿ 8ರ ಸುಮಾರಿಗೆ ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ರಾಸಲೀಲೆಯಲ್ಲಿ ತೊಡಗಿದ್ದಾಳೆ. ಅದೇ ವೇಳೆ ಪತಿ ವೆಂಕಟರಮಣ ಮನೆಗೆ ಬಂದಿದ್ದು, ಇಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಈ ವೇಳೆ ಮೂವರ ನಡುವೆ ಜೋರು ಜಗಳವಾಗಿದೆ. ಮದ್ಯ ಸೇವಿಸಿ ಬಂದಿದ್ದ ವೆಂಕಟರಮಣನ ಮೇಲೆ ನಿತೀಶ್ ಕುಮಾರ್ ಹಲ್ಲೆ ನಡೆಸಿ, ಕೆಳಗೆ ಬಿದ್ದಾಗ ಆತನ ತಲೆಗೆ ರುಬ್ಬುವ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಇಬ್ಬರು ಸೆಕ್ಯೂರಿಟಿ ಗಾರ್ಡ್ ಕೊಠಡಿಯ ಬಳಿಯ ಶೌಚಾಲಯಕ್ಕೆ ಎಳೆದೊಯ್ದು ಮಲಗಿಸಿದ್ದಾರೆ. ಆರೋಪಿ ನಿತೀಶ್ ಕುಮಾರ್ ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.
ಆ ನಂತರ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿದ ನಂದಿನಿ, ಪತಿ ಶೌಚಾಲಯದಲ್ಲಿ ಕಾರು ಜಾರಿ ಬಿದ್ದಿದ್ದಾರೆ ಎಂದು ಕರೆ ಮಾಡಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರಿಗೆ, ವೆಂಕಟರಮಣನ ಮೃತದೇಹ ಗಮನಿಸಿದಾಗ ಬಿದ್ದು ಮೃತಪಟ್ಟಿರಲು ಸಾಧ್ಯವಿಲ್ಲ. ಯಾರೋ ಹಲ್ಲೆ ನಡೆಸಿಯೇ ಮೃತಪಟ್ಟಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿತ್ತು.