ರಾಯಚೂರು:- ನಾನು ಎಲ್ಲಿಯೂ ಅಯೋಧ್ಯೆಗೆ ಭೇಟಿ ಕೊಡುತ್ತೇನೆ ಎಂದೂ ಹೇಳಿಲ್ಲ ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ.
ನಾನು ರಾಮನ ವಿರೋಧಿಯೂ ಅಲ್ಲ, ರಾಮಮಂದಿರ ನಿರ್ಮಾಣದ ವಿರೋಧಿಯೂ ಅಲ್ಲ. ಅಯೋಧ್ಯೆಗೆ ಭೇಟಿ ಕೊಡುತ್ತೇನೆ ಎಂದೂ ಹೇಳಿಲ್ಲ. ಆದರೆ ರಾಮಮಂದಿರ ಹೆಸರಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪಾದಿಸಿದರು.
ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಮಾಜಿ ಶಾಸಕ ಯತೀಂದ್ರ ಅವರನ್ನು ಕಣಕ್ಕಿಳಿಸುವುದಾಗಿ ನಾನಾಗಲಿ, ಯತೀಂದ್ರ ಆಗಲಿ ಹೇಳಿಲ್ಲ. ಪ್ರತಾಪ್ ಸಿಂಹ ಅವರಿಗೆ ಸೋಲಿನ ಹೆದರಿಕೆ ಶುರುವಾಗಿದೆ. ಹಾಗಾಗಿ ಏನೇನೋ ಹೇಳಿಕೆ ನೀಡುತ್ತಿದ್ದಾರೆ’ ಎಂದರು.
‘ನಗರಾಭಿವೃದ್ಧಿ ಸಚಿವರು ಚುನಾವಣಾ ವೀಕ್ಷಕರಾಗಿ ಹೋಗಿದ್ದರು. ಅವರು ನೀಡಿರುವ ವರದಿ ಆಧಾರದ ಮೇಲೆ ನಾವು ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.
ಗೃಹ ಲಕ್ಷ್ಮಿ ಯೋಜನೆಯಡಿ ಕೊಡುವ ₹2 ಸಾವಿರ ಯಾವುದಕ್ಕೂ ಸಾಲುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ‘ಪ್ರಧಾನಿ ಹಾಗೂ ಮುಖ್ಯಮಂತ್ರಿಯಾದಾಗ ಒಂದು ನೂರು ರೂಪಾಯಿ ಸಹ ಜನರಿಗೆ ನೀಡಿಲ್ಲ. ಈ ಕುರಿತು ಮಾತನಾಡಲು ಅವರು ಅರ್ಹರಲ್ಲ’ ಎಂದರು.