ಬೆಂಗಳೂರು:- ತಮ್ಮ ವಿರುದ್ಧದ ಎಫ್ಐಆರ್ ರದ್ದುಕೋರಿ ಬೆಂಗಳೂರು ಹೈಕೋರ್ಟ್ಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್ಗೆ 439 ಕೋಟಿ ರೂ. ಸಾಲ ಪಾವತಿಸದೇ ವಂಚಿಸಿರುವ ಆರೋಪವನ್ನು ಎದುರಿಸುತ್ತಿರುವ ಸೌಭಾಗ್ಯಲಕ್ಷ್ಮಿ ಶುಗರ್ಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಮೇಶ್ ಜಾರಕಿಹೊಳಿ ಹಾಗೂ ಮತ್ತಿಬ್ಬರು ನಿರ್ದೇಶಕರಾಗಿದ್ದ ವಸಂತ್ ಪಾಟೀಲ್ ಮತ್ತು ಶಂಕರ್ ಪವಾಡೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ರಮೇಶ್ ಜಾರಕಿಹೊಲಿ ಸೇರಿದಂತೆ ಇನ್ನಿಬ್ಬರು, ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್ ಮತ್ತು ಅದರ ಸಮೂಹದ ಬ್ಯಾಂಕ್ಗಳಲ್ಲಿ ಅವಧಿ ಸಾಲ, ದುಡಿಯುವ ಬಂಡವಾಳದ ರೂಪದಲ್ಲಿ 2013ರ ಜುಲೈ 12 ರಂದು ರಿಂದ 2017ರ ಮಾರ್ಚ್ 31ರ ಅವಧಿಯಲ್ಲಿ 232.88 ಕೋಟಿ ಸಾಲ ಪಡೆದಿದ್ದರು. ಇದು 439.7 ಕೋಟಿಗೆ ಏರಿಕೆಯಾಗಿದ್ದರೂ ಅದನ್ನು ಪಾವತಿಸಿರಲಿಲ್ಲ.
ಸಾಲ ಪಡೆಯುವ ಸಂದರ್ಭದಲ್ಲಿ ಶುಗರ್ ಕಂಪೆನಿಯಲ್ಲಿ ಜಾರಕಿಹೊಳಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ವಸಂತ್ ಮತ್ತು ಶಂಕರ್ ಅವರು ನಿರ್ದೇಶಕರಾಗಿದ್ದರು. ಸಾಲ ಇರುವ ಸಂದರ್ಭದಲ್ಲಿ ನಿರ್ದೇಶಕರನ್ನು ಬದಲಿಸುವಂತಿಲ್ಲ ಎಂಬ ಷರತ್ತು ವಿಧಿಸಲಾಗಿತ್ತು. ಆದರೆ, ಆರೋಪಿಗಳು/ಅರ್ಜಿದಾರರು ಕಂಪೆನಿಯಲ್ಲಿನ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದು, ಇತರೆ ವ್ಯಕ್ತಿಗಳನ್ನು ಆ ಹುದ್ದೆಗಳಿಗೆ ನೇಮಿಸಲಾಗಿದೆ.
ಈ ವಿಚಾರವನ್ನು ತಮ್ಮ ಗಮನಕ್ಕೆ ತಂದಿಲ್ಲ ಎಂದು ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರು ಜನವರಿ 5ರಂದು ನೀಡಿದ ದೂರಿನ ಅನ್ವಯ ವಿವಿ ಪುರಂ ಠಾಣೆಯಲ್ಲಿ ಆರೋಪಿಗಳ ವಿರುದ್ಧ FIR ದಾಖಲಿಸಿದ್ದಾರೆ.