ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ (Pri yanka Gandhi Vadra) ಮುಂಬರುವ ಲೋಕಸಭಾ ಕ್ಷೇತ್ರದಿಂದ (Koppala Lok Sabha) ಕಣಕ್ಕೆ ಇಳಿಯು ತ್ತಾರಾ ಹೀಗೊಂದು ಪ್ರಶ್ನೆ ಎದ್ದಿದೆ. ರಾಜ್ಯಮಟ್ಟದ ನಾಯಕರಿಗೆ ತಿಳಿಸದೇ ಎಐಸಿಸಿ (AICC) ರಹಸ್ಯವಾಗಿ ಕರ್ನಾಟಕದ ಕೊಪ್ಪಳ (Koppala) ಮತ್ತು ತೆಲಂಗಾಣದ ಒಂದು ಲೋಕಸಭಾ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿದೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾಗದಲ್ಲಿ ಕಾಂಗ್ರೆಸ್ ಇನ್ನೂ ಗಟ್ಟಿಯಾಗಿದೆ. ಸದ್ಯ ಕರ್ನಾಟಕ, ತೆಲಂಗಾಣದಲ್ಲಿ ಅಧಿಕಾರದಲ್ಲಿದ್ದರೆ ತಮಿಳುನಾಡು, ಕೇರಳದಲ್ಲಿ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ದಕ್ಷಿಣ ಭಾಗದಿಂದ ಸ್ಪರ್ಧಿಸಿದರೆ ಪಕ್ಷಕ್ಕೆ ಅನುಕೂಲ. ಅದರಲ್ಲೂ ಗಾಂಧಿ ಕುಟುಂಬ ಕರ್ನಾಟಕದಿಂದ ಸ್ಪರ್ಧೆ ಮಾಡಬೇಕು. ಕರ್ನಾಟಕಕ್ಕೆ ಬಂದರೆ ಪಕ್ಷಕ್ಕೆ ಲಾಭ ಆಗಲಿದೆ ಎಂದು ರಾಜ್ಯ ನಾಯಕರು ಈ ಹಿಂದೆ ಹೇಳಿಕೆ ನೀಡಿದ್ದರು. ಇದಕ್ಕೆ ಪೂರಕ ಎಂಬಂತೆ ಎಐಸಿಸಿ ಕೊಪ್ಪಳ ಕ್ಷೇತ್ರದಲ್ಲಿ ರಹಸ್ಯವಾಗಿ ಸಮೀಕ್ಷೆ ನಡೆಸಿದೆ.
ಕೊಪ್ಪಳದಲ್ಲಿ ಯಾಕೆ?
ರಾಯಚೂರು ಜಿಲ್ಲೆಯ 2, ಬಳ್ಳಾರಿ ಜಿಲ್ಲೆಯ 1 ವಿಧಾನಸಭಾ ಕ್ಷೇತ್ರ ಒಳಗೊಂಡಂತೆ ಒಟ್ಟು 8 ವಿಧಾನಸಭಾ ಕ್ಷೇತ್ರ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. 8ರ ಪೈಕಿ 6 ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದರೆ ಒಂದು ಕ್ಷೇತ್ರದಲ್ಲಿ ಬಿಜೆಪಿ ಇನ್ನೊಂದು ಕ್ಷೇತ್ರದಲ್ಲಿ ಜನಾರ್ದನ ರೆಡ್ಡಿ ಶಾಸಕರಾಗಿದ್ದಾರೆ. ಸಾಮಾಜಿಕ ಸ್ಥಿತಿಗತಿ ರಾಜಕೀಯ ಚಿತ್ರಣ ಹಾಗೂ ಜಾತಿ ಲೆಕ್ಕಾಚಾರ ಎಲ್ಲವನ್ನೂ ಒಳಗೊಂಡಂತೆ ಸರ್ವೆ ಮಾಡಲಾಗಿದೆ. ಸಮೀಕ್ಷೆಯಲ್ಲಿ ಕಾಂಗ್ರೆಸ್ಗೆ ಕೊಪ್ಪಳ ಸೇಫ್ ಕ್ಷೇತ್ರ ಎಂಬ ಫಲಿತಾಂಶ ಬಂದಿದೆ.
ಪ್ರಿಯಾಂಕಾ ಸ್ಪರ್ಧಿಸುತ್ತಾರಾ?
ಪ್ರಿಯಾಂಕಾ ಗಾಂಧಿ ಇಲ್ಲಿಯವರೆಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿಲ್ಲ. ಗಾಂಧಿ ಕುಟುಂಬದ ಸೋನಿಯಾ ಗಾಂಧಿ ಉತ್ತರಪ್ರದೇಶದ ರಾಯ್ಬರೇಲಿಯಿಂದ, ರಾಹುಲ್ ಗಾಂಧಿ ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 2019ರ ಚುನಾವಣೆಯಲ್ಲಿ ಅಮೇಥಿಯಲ್ಲಿ ಕಷ್ಟ ಎನ್ನುವುದು ಮೊದಲೇ ತಿಳಿದಿದ್ದ ಕಾರಣ ರಾಹುಲ್ ಗಾಂಧಿ ಕೇರಳದ ವಯನಾಡ್ನಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಅಮೇಠಿಯಲ್ಲಿ ಸ್ಮೃತಿ ಇರಾನಿ ಗೆದ್ದಿದ್ದರು.
ಕಳೆದ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಮೋದಿ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಚುನಾವಣೆಯಲ್ಲಿ ಕಣಕ್ಕೆ ಇಳಿದಿರಲಿಲ್ಲ. ಈ ಬಾರಿ ಪ್ರಿಯಾಂಕಾ ಗಾಂಧಿ ಕಣಕ್ಕೆ ಇಳಿಯಬೇಕು ಎಂಬ ಕೂಗು ಪಕ್ಷದಿಂದಲೇ ಜೋರಾಗಿ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಎಐಸಿಸಿ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕೆ ಇಳಿಸಲು ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.