ಬೆಂಗಳೂರು: ಬೆಂಗಳೂರಿನ ಜಯನಗರದಲ್ಲಿರೋ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಯಶಸ್ವಿನಿ ಕಾರ್ಡ್ ಫಲಾನುಭವಿಗಳಿಂದ ಡಿಸ್ಚಾರ್ಜ್ ವೇಳೆ ಹಣ ಪಡೆಯಲಾಗ್ತಿದೆ ಅನ್ನೋ ಆರೋಪ ಕೇಳಿಬಂದಿದೆ. ತುಮಕೂರು ಮೂಲದ ಯುವಕನೊಬ್ಬ ಡಿಸೆಂಬರ್ 30ನೇ ತಾರೀಕು ಕಾಲಿನ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ರು, ಚಿಕಿತ್ಸೆ ಮುಗಿಸಿ ಡಿಸ್ಚಾರ್ಜ್ ಆಗೋ ವೇಳೆ ಆಸ್ಪತ್ರೆ ಸಿಬ್ಬಂದಿ 3 ಸಾವಿರ ರೂಪಾಯಿ ಪಡೆದು ಬಿಲ್ ಕೈಗಿಟ್ಟಿದ್ದಾರೆ. ಬಿಲ್ ನಲ್ಲಿ ಸೇವೆಯ ವಿವರ ಇಲ್ಲದ್ದನ್ನ ಕಂಡ ರೋಗಿ ಸಂಬಂಧಿಕರು, ಹಣ ಯಾಕೆ ಪಡಿತಿದ್ದಾರೆ ಅಂತಾ ತಮ್ಮ ಜಿಲ್ಲೆಯ ಯಶಸ್ವಿನಿ ಸಂಯೋಜಕರನ್ನ ಕೇಳಿದಾಗ, ದೂರು ನೀಡಿವಂತೆ ಸೂಚನೆ ಕೊಟ್ಟಿದ್ದಾರೆ.
ಇನ್ನು ಯಶಸ್ವಿನಿ ಕಾರ್ಡ್, ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಚಿಕಿತ್ಸೆ ಅಥವಾ ರಿಯಾಯಿತಿ ನೀಡಬೇಕು ಅನ್ನೋ ನಿಯಮವಿದೆ. ಆದರೆ ಡಿಸ್ಚಾರ್ಜ್ ಬಿಲ್ನಲ್ಲಿ ಯಾವುದಕ್ಕೆ ಹಣ ಪಡೆದಿದ್ದಾರೆ ಅನ್ನೋದನ್ನ ನಮೂದಿಸದೇ ಇರೋದು ಹಲವು ಅನುಮಾನ ಮೂಡಿಸಿದೆ. ಇನ್ನು ಈ ಬಗ್ಗೆ ಆಸ್ಪತ್ರೆಯ ನಿರ್ದೇಶಕರನ್ನ ಕೇಳಿದ್ರೆ, ಆ ರೀತಿ ಸುಮ್ಮ ಸುಮ್ಮನೆ ಹಣ ತೆಗೆದುಕೊಳ್ಳಲ್ಲ, ಒಂದು ವೇಳೆ ಏನಾದ್ರೂ ಸಮಸ್ಯೆಯಾಗಿದ್ರೆ ಹಣ ಹಿಂದಿರುಗಿಸ್ತೀವೆ ಅಂತಿದ್ದಾರೆ. ಆದರೆ ಆಸ್ಪತ್ರೆಗೆ ಬಂದು ಡಿಸ್ಚಾರ್ಜ್ ಆದ ಕೆಲ ರೋಗಿಗಳು, ಹಣ ಹಿಂತಿರುಗಿಸಿ ಅಂತಾ ಈ ಹಿಂದೆ ಇದ್ದ ನಿರ್ದೇಶಕರಿಗೆ ಪತ್ರ ಬರೆದಿದ್ದು, ಇದರಿಂದ ಹಣ ಎಷ್ಟರಮಟ್ಟಿಗೆ ರೋಗಿಗಳಿಗೆ ವಾಪಸ್ ಆಗ್ತಿದೆ ಅನ್ನೋ ಪ್ರಶ್ನೆ ಮೂಡಿಸಿದೆ.
ಸದ್ಯ ಆಸ್ಪತ್ರೆಯ ಡಿಸ್ಚಾರ್ಜ್ ಬಿಲ್ ಪಡೆದ ರೋಗಿ ಹಾಗೂ ಆತನ ಸಂಬಂಧಿಕರು, ಯಶಸ್ವಿನಿ ಕಾರ್ಡ್ ಸೇವೆಯಲ್ಲಿ ಏನೋ ಗೋಲ್ ಮಾಲ್ ಆಗ್ತಿದೆ ಅಂತಾ ಅನುಮಾನ ವ್ಯಕ್ತಪಡಿಸಿದ್ದಾರೆ